ಬೆಂಗಳೂರಿನ ಈ 4 ಫ್ಲೈ ಓವರ್ಗಳಲ್ಲಿ ಇಂದಿನಿಂದಲೇ ಹೊಸ ನಿಯಮ ಜಾರಿ: ಬೈಕ್, ಆಟೋ, ಗೂಡ್ಸ್ ವಾಹನ ಸಂಚಾರ ನಿಷೇಧ
ಬೆಂಗಳೂರಿನ 4 ಫ್ಲೈಓವರ್‌ಗಳಲ್ಲಿ ಬೈಕ್, ಆಟೋ ಹಾಗೂ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಇಂದಿನಿಂದ ಹೊಸ ನಿಯಮಗಳು ಜಾರಿಯಾಗಿವೆ. ಸಂಚಾರ ದಟ್ಟಣೆ, ಅಪಘಾತಗಳನ್ನು ನಿಯಂತ್ರಿಸಲು ಮತ್ತು ವೀಲಿಂಗ್ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಏರ್‌ಪೋರ್ಟ್, ಕೆ.ಆರ್. ಮಾರ್ಕೆಟ್, ಪೀಣ್ಯ ಮತ್ತು ರಾಗಿಗುಡ್ಡ ಫ್ಲೈಓವರ್‌ಗಳಲ್ಲಿ 24/7 ಮತ್ತು ಸಮಯಾಧಾರಿತ ನಿರ್ಬಂಧಗಳನ್ನು ವಿಧಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 4: ಬೆಂಗಳೂರಿನ ಪ್ರಮುಖ 4 ಫ್ಲೈಓವರ್‌ಗಳಲ್ಲಿ ಇಂದಿನಿಂದ ಹೊಸ ಸಂಚಾರ ನಿಯಮಗಳು ಜಾರಿಯಾಗುತ್ತಿವೆ. ಸಂಚಾರ ದಟ್ಟಣೆ, ಅಪಘಾತಗಳನ್ನು ತಡೆಯುವ ಹಾಗೂ ವ್ಹೀಲಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಿರ್ದಿಷ್ಟ ಫ್ಲೈಓವರ್‌ಗಳಲ್ಲಿ ವಿವಿಧ ರೀತಿಯ ವಾಹನಗಳಿಗೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಏರ್‌ಪೋರ್ಟ್ ಫ್ಲೈಓವರ್‌ನಲ್ಲಿ ಬೈಕ್ ಮತ್ತು ಆಟೋಗಳಿಗೆ ದಿನದ 24 ಗಂಟೆಯೂ ನಿಷೇಧವಿದೆ. ಸರಕು ಸಾಗಾಣಿಕೆ ವಾಹನಗಳಿಗೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧ ವಿಧಿಸಲಾಗಿದೆ. ಕೆ.ಆರ್. ಮಾರ್ಕೆಟ್ ಫ್ಲೈಓವರ್‌ನಲ್ಲಿ ಭಾರೀ ಸರಕು ಸಾಗಾಣಿಕೆ ವಾಹನಗಳಿಗೆ 24 ಗಂಟೆ ನಿಷೇಧವಿದೆ, ಆದರೆ ಇತರ ಸರಕು ವಾಹನಗಳಿಗೆ ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 10 ರವರೆಗೆ ನಿರ್ಬಂಧವಿದೆ.
ಪೀಣ್ಯ ಫ್ಲೈಓವರ್‌ನಲ್ಲಿ ಆಟೋ ಮತ್ತು ತ್ರಿಚಕ್ರ ಗೂಡ್ಸ್ ಆಟೋಗಳಿಗೆ 24 ಗಂಟೆಯೂ ಸಂಚಾರ ನಿಷೇಧಿಸಲಾಗಿದೆ. ಭಾರೀ ಮತ್ತು ಮಧ್ಯಮ ಸರಕು ವಾಹನಗಳಿಗೆ ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 10 ರವರೆಗೆ ನಿರ್ಬಂಧ ಅನ್ವಯಿಸುತ್ತದೆ. ರಾಗಿಗುಡ್ಡ ಫ್ಲೈಓವರ್‌ನಲ್ಲಿ (ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ) ಭಾರೀ ಸರಕು ವಾಹನಗಳಿಗೆ ದಿನದ 24 ಗಂಟೆಯೂ ನಿಷೇಧ ಜಾರಿಯಲ್ಲಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

