ಖಾಸಗಿ ಶಾಲೆಯ ಒಳ್ಳೆ ಸಂಬಳ ಬಿಟ್ಟು ಸರ್ಕಾರಿ ಶಾಲೆಗೆ ಬಂದ ಶಿಕ್ಷಕರಿಗೆ ಶಾಕ್: 15 ತಿಂಗಳಿಂದ ಸಿಕ್ಕಿಲ್ಲ ವೇತನ, ಜೀವನವೇ ಕಂಗಾಲು
ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ ಎಲ್‌ಕೆಜಿ, ಯುಕೆಜಿ ಶಿಕ್ಷಕರು ಮತ್ತು ಆಯಾಗಳಿಗೆ ಕಳೆದ 15 ತಿಂಗಳಿಂದ ವೇತನ ಪಾವತಿಯಾಗಿಲ್ಲ. 101 ಮಂದಿ ಸಿಬ್ಬಂದಿ ಜೀವನ ನಿರ್ವಹಣೆಗೆ ಪರದಾಡುತ್ತಿದ್ದು, ಪ್ರತಿದಿನ ಶಿಕ್ಷಣ ಇಲಾಖೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೂಡಲೇ ವೇತನ ಬಿಡುಗಡೆ ಮಾಡುವಂತೆ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬೀದರ್, ನ.2: ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉಚಿತ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಿಗಬೇಕು ಹಾಗೂ ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದ ಪೋಷಕರಿಗೆ ಮುಕ್ತಿ ಸಿಗಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾದ ಎಲ್‌ಕೆಜಿ (LKG) ಹಾಗೂ ಯುಕೆಜಿ (UKG) ತರಗತಿಗಳು ಇದೀಗ ಸಿಬ್ಬಂದಿಗಳ ಪಾಲಿಗೆ ಸಂಕಷ್ಟ ತಂದೊಡ್ಡಿವೆ. ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 101 ಶಿಕ್ಷಕರು ಹಾಗೂ ಆಯಾಗಳಿಗೆ ಕಳೆದ 15 ತಿಂಗಳಿಂದ ಸರಿಯಾಗಿ ವೇತನವೇ ಪಾವತಿಯಾಗದೆ ತೀವ್ರ ಆರ್ಥಿಕ ನರಕಯಾತನೆ ಅನುಭವಿಸುತ್ತಿದ್ದಾರೆ. ಬೀದರ್, ಭಾಲ್ಕಿ ಹಾಗೂ ಔರಾದ್ ತಾಲೂಕುಗಳ ಸುಮಾರು 50 ಸರ್ಕಾರಿ ಶಾಲೆಗಳಲ್ಲಿ ಈ ತರಗತಿಗಳು ಕಾರ್ಯನಿರ್ವಹಿಸುತ್ತಿದ್ದು, ನಿಯಮಾನುಸಾರ ನೇಮಕಗೊಂಡ ಸಿಬ್ಬಂದಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಗೌರವಧನ ಬಿಡುಗಡೆಯಾಗಿಲ್ಲ. ಸರ್ಕಾರಿ ಮಾರ್ಗಸೂಚಿಯಂತೆ ಈ ತರಗತಿಗಳ ಬೋಧನೆಗಾಗಿ ನೇಮಕಗೊಂಡ ಶಿಕ್ಷಕರಿಗೆ ಮಾಸಿಕ 12,000 ರೂ. ಹಾಗೂ ಮಕ್ಕಳ ಆರೈಕೆ ಮಾಡುವ ಆಯಾಗಳಿಗೆ ಮಾಸಿಕ ₹6,520 ವೇತನವನ್ನು ನಿಗದಿಪಡಿಸಲಾಗಿದೆ. ಈ ಸಿಬ್ಬಂದಿಗಳನ್ನು ಅತಿಥಿ ಶಿಕ್ಷಕರು/ಸಿಬ್ಬಂದಿಯಾಗಿ ಆಯ್ಕೆ ಮಾಡಿ ಶಾಲಾ ಮುಖ್ಯೋಪಾಧ್ಯಾಯರು ಡಿಡಿಪಿಐ (DDPI) ಮೂಲಕ ಪಟ್ಟಿ ಸಲ್ಲಿಸಿದ್ದರು. ಇವರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಯಿಂದ ವೇತನ ಪಾವತಿಯಾಗಬೇಕಿತ್ತು. ಆದರೆ ಮಂಡಳಿಯಿಂದ ಈವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಬೀದರ್ ಜಿಲ್ಲೆಯಲ್ಲಿ ಒಟ್ಟು 51 ಶಿಕ್ಷಕರು ಹಾಗೂ 50 ಆಯಾಗಳು ಸೇರಿ ಒಟ್ಟು 101 ಸಿಬ್ಬಂದಿಗಳು ಕಳೆದ 1.5 ವರ್ಷದಿಂದ (15 ತಿಂಗಳು) ಕಾಸಿಲ್ಲದೆ ಕುಟುಂಬ ನಿರ್ವಹಣೆ ಮಾಡಲು ಪರದಾಡುತ್ತಿದ್ದು, ಪ್ರತಿದಿನ ಶಿಕ್ಷಣ ಇಲಾಖೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಬೋಧಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಸಾಥ್ ನೀಡಲು ಹಾಗೂ ಸುಭದ್ರ ಭವಿಷ್ಯದ ನಿರೀಕ್ಷೆಯಲ್ಲಿ ಈ ಶಿಕ್ಷಕರು ಹಿಂದೆ ಖಾಸಗಿ ಶಾಲೆಗಳಲ್ಲಿದ್ದ ಉತ್ತಮ ವೇತನದ ಕೆಲಸಗಳನ್ನು ತೊರೆದು ಬಂದಿದ್ದರು. ಆದರೆ 15 ತಿಂಗಳಿನಿಂದ ವೇತನವೇ ಸಿಗದಿರುವುದು ಅವರ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕುಟುಂಬ ನಿರ್ವಹಣೆ, ದಿನನಿತ್ಯದ ವೆಚ್ಚ ಹಾಗೂ ಮಕ್ಕಳ ಶಿಕ್ಷಣಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸಂತ್ರಸ್ತ ಸಿಬ್ಬಂದಿಗಳು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೂ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ಬಿಡುಗಡೆಗೊಳಿಸಿ, 15 ತಿಂಗಳ ಬಾಕಿ ವೇತನವನ್ನು ತಕ್ಷಣವೇ ಪಾವತಿಸಬೇಕೆಂದು ಸಂತ್ರಸ್ತ ಶಿಕ್ಷಕರು ಹಾಗೂ ಆಯಾಗಳು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

