ಕ್ಷೇತ್ರದ ಜನರನ್ನು ದೇವರ ಹೆಸರಲ್ಲಿ ಬ್ಲ್ಯಾಕ್ಮೇಲ್ ಮಾಡಿ ನಾಯಿ ಅಂತ ನಿಂದಿಸಿದ ಶಾಸಕ ಹರೀಶ್ ಪೂಂಜಾ!
ದೇವರ ಹೆಸರಲ್ಲಿ ಜನರನ್ನು ಬ್ಲ್ಯಾಕ್ಮೇಲ್ ಮಾಡಿದ ರಾಜ್ಯದ ಮೊದಲ ಶಾಸಕ ಹರೀಶ್ ಪೂಂಜಾ ಇರಬಹುದು. ಜನ ಇನ್ನೂ ನಿರಕ್ಷರಕುಕ್ಷಿಗಳು, ಹೆದರಿಸಿದರೆ ಹೆದರುತ್ತಾರೆ ಅಂತ ಅವರು ಈ ಜಮಾನದಲ್ಲೂ ಭಾವಿಸುತ್ತಿರುವುದು ಮೂರ್ಖತನದ ದ್ಯೋತಕವಾಗಿದೆ. ದೇವರು, ಧರ್ಮ, ನಂಬಿಕೆ ಮತ್ತು ಶ್ರದ್ಧೆ ವೈಯಕ್ತಿಕ ಸಂಗತಿಗಳು. ಅವುಗಳನ್ನು ಬಳಸಿ ಜನರನ್ನು ಹೆದರಿಸಲಾಗದು.
ಮಂಗಳೂರು: ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಮನಸ್ಥಿತಿಯ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಈಗಾಗಲೇ ವರದಿಯಾಗಿರುವಂತೆ ಅವರಿಗೆ ನಾಲಗೆ ಮೇಲೆ ಹಿಡಿತವಿಲ್ಲ. ಮುಖ್ಯಮಂತ್ರಿಯನ್ನು ಪೊಲೀಸರನ್ನು ಮತ್ತು ತಮ್ಮೊಂದಿಗೆ ಕಿರಿಕ್ ಮಾಡಿಕೊಳ್ಳುವವರನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಾರೆ. ಮೊನ್ನೆ ಅವರು ಬೆಳ್ತಂಗಡಿಯ ಮಾರಿಗುಡಿ ದೇವಸ್ಥಾನದಲ್ಲಿ ನಾನು ಭ್ರಷ್ಟಾಚಾರಿ ಅಲ್ಲ, ಒಂದು ಪೈಸೆಯನ್ನೂ ಕಮೀಶನ್ ರೂಪದಲ್ಲಿ ಪಡೆದಿಲ್ಲ ಎಂದು ಪ್ರಮಾಣ ಮಾಡಿದ್ದರು! ಇವತ್ತು ಅವರು ಮಳೆಯಿಂದ ತೀವ್ರ ಹಾನಿಗೊಳಗಾಗಿರುವ ಸವಣಾಲು ಗ್ರಾಮಕ್ಕೆ ಭೇಟಿ ನೀಡಿದಾಗ ತಡವಾಗಿ ಊರಿಗೆ ಬಂದಿದ್ದಕ್ಕೆ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ದಾಳಿಯಿಂದ ರೊಚ್ಚಿಗೆದ್ದ ಶಾಸಕ ಪೂಂಜಾ, ತನ್ನನ್ನು ಪ್ರಶ್ನಿಸಿದರೆ ದೇವರ ಮೂಲಕ ಶಾಪ ಹಾಕಿಸುತ್ತೇನೆ ಎಂದು ಶಪಥ ಮಾಡಲಾರಂಭಿಸಿ ಗ್ರಾಮಸ್ಥರನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಆದರೆ ಅವರಿಗೆ ವೋಟು ನೀಡಿ ಗೆಲ್ಲಿಸಿದ ಜನ ಹುಚ್ಚರೇನೂ ಅಲ್ಲ. ಶಾಸಕನ ಬ್ಲ್ಯಾಕ್ಮೇಲ್ ತಂತ್ರಕ್ಕೆ ಮಣಿಯದೆ ವಾಗ್ದಾಳಿ ಮುಂದುವರಿಸಿದ್ದಾರೆ. ತಾಳ್ಮೆ ಕಳೆದುಕೊಂಡ ಶಾಸಕ ಜನರನ್ನು ನಾಯಿ ಅಂತ ನಿಂದಿಸಿದ್ದಾರೆ. ಕೊನೆಗೆ ಜನರ ಮುಂದೆ ತಮ್ಮದೇನೂ ನಡೆಯಲ್ಲ ಅಂತ ಖಾತ್ರಿಯಾದ ಮೇಲೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹರೀಶ್ ಪೂಂಜಾ ಮನೆಮುಂದೆ ಪೊಲೀಸರೊಂದಿಗೆ ಶಾಸಕನ ಬೆಂಬಲಿಗರ ವಾಗ್ವಾದ, ದೊಂಬಿಯಂಥ ಸನ್ನಿವೇಶ!