ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಬೆಳಗ್ಗೆ ಡಿಸಿಎಂ ಮನೆಗೆ ಭೇಟಿ ನೀಡಿದ್ದು ಯಾಕೆ ಗೊತ್ತಾ?

|

Updated on: Aug 27, 2024 | 12:36 PM

ಮದುವೆ, ನಿಶ್ಚಿತಾರ್ಥ ಮತ್ತು ಇತರ ಸಮಾರಂಭಗಳ ಆಹ್ವಾನ ಪತ್ರಿಕೆ ನೀಡಲು ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಮನೆಗೆ ಹೋಗೋದು ಸಾಮಾನ್ಯ ಸಂಗತಿ. ಕೆಲ ತಿಂಗಳುಗಳ ಹಿಂದೆ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಬಿ ಶ್ರೀರಾಮುಲು ಸಹ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮನೆಗೆ ತೆರಳಿ ಮಗಳ ಮದುವೆ ಇನ್ವಿಟೇಶನ್ ನೀಡಿದ್ದರು.

ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ವಿರೋಧ ಪಕ್ಷದ ನಾಯಕರ ಪೈಕಿ ಯಾರಾದರೂ ಭೇಟಿ ನೀಡಿದರೆ ಅದು ಸುದ್ದಿಯಾಗುತ್ತದೆ. ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಇಂದು ಬೆಳಗ್ಗೆ ಶಿವಕುಮಾರ್ ಮನೆಗೆ ಆಗಮಿಸಿದಾಗ ಸಹಜವಾಗೇ ಅಚ್ಚರಿ ಉಂಟಾಗಿತ್ತು. ವಿಶ್ವನಾಥ್ ತಮ್ಮ ರಾಜಕೀಯ ಬದುಕಿನ ಆರಂಭದಿಂದಲೂ ಬಿಜೆಪಿಯಲ್ಲಿ ಬೆಳೆದು ಬಂದವರು ಮತ್ತು ಜೇಡವನ್ನು ಜೇಡವೆಂದೇ ಕರೆಯುವ ಸ್ವಭಾವದವರು. ಒಮ್ಮೆ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದಾಗ ವಿಶ್ವನಾಥ್, ವಿರೋಧ ಪಕ್ಷದ ನಾಯಕ ಆರ್ ಅಶೋಕ ಮಾತಿಗೂ ಬೆಲೆ ನೀಡದೆ ತಮ್ಮ ಮಾತನ್ನು ಸಾಧಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ ಕೆ ಸುಧಾಕರ್ ಗೆ ಟಿಕೆಟ್ ನೀಡಿದ್ದನ್ನು ಬಲವಾಗಿ ವಿರೋಧಿಸಿದ್ದ ವಿಶ್ವನಾಥ್ ಕೊನೆ ಹಂತದವರೆಗೆ ಪ್ರಚಾರಕ್ಕೆ ಹೋಗಿರಲಿಲ್ಲ. ಇಂಥ ವಿಶ್ವನಾಥ್, ಶಿವಕುಮಾರ್ ಮನೆಗೆ ಬಂದಾಗ ಆಶ್ಚರ್ಯವಾಗದಿರುತ್ತದೆಯೇ? ಅಸಲಿಗೆ ಅವರು ತಮ್ಮ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದ ಅಮಂತ್ರಣ ಪತ್ರಿಕೆ ನೀಡಲು ಆಗಮಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಅಮಿತ್ ಶಾ ಸಂಧಾನ ಸಫಲ, ಮುನಿಸು ಮರೆತು ಮರೆತು ಒಂದಾದ ಎಸ್ ಆರ್ ವಿಶ್ವನಾಥ್ ಮತ್ತು ಡಾ ಕೆ ಸುಧಾಕರ್