“ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ, ಇಲ್ಲದಿದ್ದರೆ ಯಾಕೆ ಹೀಗೆ ರಾತ್ರಿವಿಡೀ ಸುತ್ತಾಡಿಸುತ್ತಿದ್ದೀರಿ?” ಪೊಲೀಸರ ವಿರುದ್ಧ ಸಿಟಿ ರವಿ ಗರಂ

ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವರನ್ನು ಬಂಧಿಸಿದ ಪೊಲೀಸರು ರಾತ್ರಿಯಿಡೀ ಅನಗತ್ಯವಾಗಿ ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದಾರೆ. ಪೊಲೀಸರ ನಡೆ ವಿರುದ್ಧ ಆಕ್ರೋಶಗೊಂಡಿರುವ ಸಿಟಿ ರವಿ ಅವರು ರಾಮದುರ್ಗದಲ್ಲಿ ಧರಣಿ ಕೂತರು. ಪೊಲೀಸರ ವಿರುದ್ಧ ಅವರು ಕೊಲೆ ಯತ್ನದ ಆರೋಪ ಹೊರಿಸಿದ್ದಾರೆ.

Follow us
ವಿವೇಕ ಬಿರಾದಾರ
|

Updated on:Dec 20, 2024 | 9:19 AM

ಬೆಳಗಾವಿ, ಡಿಸೆಂಬರ್​ 20: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್​​ಸಿ ಸಿಟಿ ರವಿ ಅವರನ್ನು ಬಂಧನವಾಗಿದ್ದು, ಬೆಂಗಳೂರಿಗೆ ಕರೆ ತರಬೇಕಿದೆ. ಆದರೆ, ಪೊಲೀಸರು ರಾತ್ರಿ ಇಡೀ ಕಾರಿನಲ್ಲೇ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಾ ಕಾಲಹರಣ ಮಾಡಿದ್ದಾರೆ. ಖಾನಾಪುರ ಠಾಣೆಯಿಂದ ಸಿ.ಟಿ.ರವಿರನ್ನು ಕರೆತಂದಿದ್ದ ಪೊಲೀಸರು, ಬೆಂಗಳೂರಿಗೆ ಶಿಫ್ಟ್​​ ಮಾಡುತ್ತೇವೆ ಅಂತೇಳಿ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಾ ಪೊಲೀಸರು ಸುತ್ತಾಡಿದ್ದಾರೆ.

ಸಿಟಿ ರವಿ ಅವರ ತಲೆಗೆ ಪೆಟ್ಟು ಬಿದ್ದು ರಕ್ತ ಸುರಿದಿದ್ದರೂ ಕ್ಯಾರೆ ಎನ್ನದ ಪೊಲೀಸರು ಕಿತ್ತೂರು, ಧಾರವಾಡ, ಸವದತ್ತಿ, ರಾಮದುರ್ಗ, ಲೋಕಾಪುರದಲ್ಲಿ ಸುತ್ತಾಡಿದ್ದಾರೆ. ರಾಮದುರ್ಗ ಬರುತ್ತಿದ್ದಂತೆ ಪೊಲೀಸರ ನಡೆಗೆ ಆಕ್ರೋಶಗೊಂಡ ಸಿ.ಟಿ.ರವಿ ಅವರು, ರಾಮದುರ್ಗ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಧರಣಿಗೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

“ನನ್ನನ್ನು ಇಲ್ಲಿಗೆ ಯಾಕೆ ಕರ್ಕೊಂಡು ಬಂದ್ರಿ, ನಿಮ್ಮ ಉದ್ದೇಶ ಇರೋದೆ ನನ್ನ ಮರ್ಡರ್​ ಮಾಡೋಕೆ, ನನ್ನ ಶೂಟ್ ಮಾಡಿ ಸಾಯಿಸಿ, ಯಾಕೆ ಹೀಗೆ ರಾತ್ರಿ ಸುತ್ತಾಡಿಸುತ್ತಿದ್ದೀರಿ? ಜಡ್ಜ್​ ಮುಂದೆ ಹಾಜರುಪಡಿಸುವ ಬದಲು ಓಡಾಡ್ತಿರೋದ್ಯಾಕೆ? ಕಸ್ಟಡಿಗೆ ತೆಗೆದುಕೊಂಡಿಲ್ಲ, ನನ್ನ ಕೊಲೆ ಮಾಡೋಕೆ ಹೊರಟಿದ್ದೀರಾ? ನೀವು ಕೊಲೆ ಮಾಡುವ ಸಂಚು ನಡೆಸಿದ್ದೀರಿ. 11 ಗಂಟೆಯಿಂದ ಖಾನಾಪುರದಿಂದ ಯಾಕೆ ಸುತ್ತಿಸಿಕೊಂಡು ಬಂದ್ರಿ” ಎಂದು ಪೊಲೀಸರ ವಿರುದ್ಧ ವಿಧಾನಪರಿಷತ್​ ಬಿಜೆಪಿ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 am, Fri, 20 December 24