ಪಾದಯಾತ್ರೆಯನ್ನು ಮುಂದುವರಿಸಲು ಮುಖ್ಯಮಂತ್ರಿಗಳೇ ಒಪ್ಪಿಗೆ ಸೂಚಿಸಿದ್ದಾರೆ: ಡಿಕೆ ಶಿವಕುಮಾರ

ಪಾದಯಾತ್ರೆಯನ್ನು ಮುಂದುವರಿಸಲು ಮುಖ್ಯಮಂತ್ರಿಗಳೇ ಒಪ್ಪಿಗೆ ಸೂಚಿಸಿದ್ದಾರೆ: ಡಿಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 28, 2022 | 9:17 PM

ರಾಜ್ಯದ ಹಲವಾರು ಕಡೆಗಳಲ್ಲಿ ಜಾತ್ರೆಗಳು ನಡೆಯುತ್ತಿವೆ. ಅವುಗಳನ್ನು ಯಾಕೆ ನಿಷೇಧಿಸಿಲ್ಲ, ಟೌನ್ ಹಾಲ್ ಮುಂದೆ ಪ್ರದರ್ಶನ ನಡೆಸಿದ ಬಜರಂಗದಳ ಕಾರ್ಯಕರ್ತರನ್ನು ಯಾಕೆ ಬಂಧಿಸಲಿಲ್ಲ, ಅವರಿಗೊಂದು ನ್ಯಾಯ ನಮಗೊಂದು ನ್ಯಾಯವಾ? ಎಂದು ಶಿವಕುಮಾರ ಖಾರವಾಗಿ ಕೇಳಿದರು.

ಕೆ ಪಿ ಸಿ ಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸಿರುವ ಪಾದಯಾತ್ರೆ ಬೆಂಗಳೂರಿಗೆ ಪ್ರವೇಶಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಮೀಶನರ್ ಅನುಮತಿ ನಿರಾಕರಿಸಿದ್ದು ಮತ್ತು ರಾಮನಗರ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ನಿಷೇದಾಜ್ಞೆ ಹೇರಿದ್ದರ ಬಗ್ಗೆ ಡಿಕೆಶಿ ಅವರು ಪ್ರತಿಕ್ರಿಯೆ ನೀಡಿದರು. ಪಾದಯಾತ್ರೆ ಮುಂದುವರಿಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಗಮನಕ್ಕೆ ತರಲಾಗಿದೆ. ಅವರು ಟ್ರಾಫಿಕ್ ಗಮನದಲ್ಲಿಟ್ಟುಕೊಂಡು ಪಾದಯಾತ್ರೆ ಮಾಡಿ ತಮ್ಮ ಸಮ್ಮತಿ ಸೂಚಿಸಿದ್ದಾರೆ. ಕೋವಿಡ್-19 ಸಂಬಂಧಿಸಿದ ಎಲ್ಲ ನಿಯಮಾವಳಿಗಳನ್ನು ಪಾಲಿಸಲಾಗುವುದು ಮತ್ತು ಹೆಚ್ಚು ಜನಜಂಗುಳಿಯಾಗದ ಹಾಗೆ ಎಚ್ಚರವಹಿಸಲಾಗುವುದು ಅಂತ ಅವರಿಗೆ ಭರವಸೆ ನೀಡಿಯೇ ಎರಡನೇ ಹಂತದ ಪಾದಯಾತ್ರೆಯನ್ನು ಆರಂಭಿಸಲಾಗಿದೆ ಎಂದು ಶಿವಕುಮಾರ ಹೇಳಿದರು.

‘ಮುಖ್ಯಮಂತ್ರಿಗಳ ಬಜೆಟ್ ಮಂಡನೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಮ್ಮ ಪಾದಯಾತ್ರೆಯನ್ನು ಎರಡು ದಿನ ಮೊಟಕುಗೊಳಿಸಿದ್ದೇವೆ, ನಮ್ಮಿಂದಾಗುವ ಎಲ್ಲ ಸಹಕಾರವನ್ನು ನಾವು ನೀಡುತ್ತಿದ್ದೇವೆ, ಮುಖ್ಯಮಂತ್ರಿಗಳು ಸಹ ತಮ್ಮ ಅಧಿಕಾರಿಗಳಿಗೆ ಸೂಚಿಸಿರುವವುದಾಗಿ ಹೇಳಿದ್ದಾರೆ. ಆದರೆ, ನಮ್ಮ ಪಾದಯಾತ್ರೆ ಶುರುವಾದ ಕೂಡಲೇ ಇವರು ಹೊಸ ನಿಯಮಗಳನ್ನು ಜಾರಿಗೆ ತರುತ್ತಾರೆ. ಹಾಗಾದರೆ, ಕೊವಿಡ್ ನಿಯಮಗಳನ್ನು ಉಲ್ಲಂಘಿಸಿದ ಈಶ್ವರಪ್ಪ ಮತ್ತು ರಾಘವೇಂದ್ರನನ್ನು ಇವರು ಯಾಕೆ ಬಂಧಿಸಲಿಲ್ಲ, ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಯಾಕೆ? ಅವರ ವಿರುದ್ಧ ಯಾಕಿನ್ನೂ ಎಫ್ ಐ ಆರ್ ದಾಖಲಿಸಿಲ್ಲ? ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ?’ ಎಂದು ಶಿವಕುಮಾರ ಪ್ರಶ್ನಿಸಿದರು.

ರಾಜ್ಯದ ಹಲವಾರು ಕಡೆಗಳಲ್ಲಿ ಜಾತ್ರೆಗಳು ನಡೆಯುತ್ತಿವೆ. ಅವುಗಳನ್ನು ಯಾಕೆ ನಿಷೇಧಿಸಿಲ್ಲ, ಟೌನ್ ಹಾಲ್ ಮುಂದೆ ಪ್ರದರ್ಶನ ನಡೆಸಿದ ಬಜರಂಗದಳ ಕಾರ್ಯಕರ್ತರನ್ನು ಯಾಕೆ ಬಂಧಿಸಲಿಲ್ಲ, ಅವರಿಗೊಂದು ನ್ಯಾಯ ನಮಗೊಂದು ನ್ಯಾಯವಾ? ಎಂದು ಶಿವಕುಮಾರ ಖಾರವಾಗಿ ಕೇಳಿದರು.

ಇದನ್ನೂ ಓದಿ:  Mekedatu Padayatra 2.0 Live: ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲು