ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಉಳ್ಳಾಲದ ಕನೀರುತೋಟದ ವೈದ್ಯನಾಥ ದೈವದ ವಲಸರಿ ಸಮಯದಲ್ಲಿ ಗದ್ದೆಯಲ್ಲಿ ಪತ್ತೆಯಾದ ತ್ಯಾಜ್ಯದಿಂದ ದೈವ ಕೋಪಗೊಂಡಿದೆ. ದೈವದ ಆಕ್ರೋಶದ ವಿಡಿಯೋ ವೈರಲ್ ಆಗಿದೆ. ಐಸ್ ಕ್ರೀಮ್ ಪ್ಯಾಕ್‌ಗಳು ಮತ್ತು ಇತರ ಕಸದಿಂದ ಮಲಿನವಾಗಿದ್ದ ಗದ್ದೆಯಲ್ಲಿ ವಲಸರಿ ನಡೆಯಲು ದೈವ ನಿರಾಕರಿಸಿದೆ. ಈ ಘಟನೆಯಿಂದ ದೈವಸ್ಥಾನದ ಆಡಳಿತ ಮಂಡಳಿ ಕಕ್ಕಾಬಿಕ್ಕಿಯಾಗಿದೆ.
ಮಂಗಳೂರು, ಡಿಸೆಂಬರ್ 28: ದೈವದ ನೇಮ ಆಗುವ ಗದ್ದೆಯಲ್ಲಿ ತ್ಯಾಜ್ಯ ರಾಶಿ ಕಂಡು ದೈವ ಕೆಂಡಾಮಂಡಲವಾದಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ (Ullal) ತಾಲೂಕಿನ ಕುಂಪಲ ಬಳಿಯ ಕನೀರುತೋಟ ಎಂಬಲ್ಲಿ ನಡೆದಿದೆ. ದೈವದ ಕೋಪಕ್ಕೆ ದೈವಸ್ಥಾನದ ಆಡಳಿತ ಮಂಡಳಿ ಕಕ್ಕಾಬಿಕ್ಕಿಯಾಗಿದ್ದಾರೆ. ಇಲ್ಲಿನ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು. ದೈವ ಆವೇಶವಾಗಿ ಇನ್ನೇನು ವಲಸರಿ ಹೊರಡಬೇಕು ಎಂಬಷ್ಟರಲ್ಲಿ ಘಟನೆ ನಡೆದಿದೆ. ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ? ನಾನು ಎಂಜಲು ತುಳಿದು ವಲಸರಿ ಹೋಗಬೇಕೆ ಎಂದು ದೈವ ಪ್ರಶ್ನೆ ಮಾಡಿದೆ. ಹೇಗೆ ಆಗಬೇಕೋ ಹಾಗೆಯೇ ಆಗಬೇಕು. ಹೇಗೋ ಆದರೆ ಆಯ್ತು ಎನ್ನುವುದು ಉಚಿತವಲ್ಲ ಎಂದು ಕೆಂಡಾಮಂಡಲವಾಗಿದೆ. ಸದ್ಯ ದೈವದ ಕೋಪಾವೇಶದ ನುಡಿಯ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.