ಬಲವಾದ ಕಾರಣ ನೀಡಿ ದರ್ಶನ್ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ನಟ ದರ್ಶನ್ ಈಗ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇರುವ ಅವರನ್ನು ನೋಡಲು ಆಪ್ತರು ಮತ್ತು ಕುಟುಂಬದವರು ಮಾತ್ರವಲ್ಲದೇ ಅಭಿಮಾನಿಗಳು ಕೂಡ ಆಗಮಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದು, ತನಿಖೆ ನಡೆಯುತ್ತಿದೆ. ಪವಿತ್ರಾ ಗೌಡ ಎ1 ಆಗಿದ್ದು, ಅವರು ಕೂಡ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ (Darshan) ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಪರಪ್ಪನ ಅಗ್ರಹಾರ ಜೈಲಿನ ಬಳಿ ದರ್ಶನ್ ಫ್ಯಾನ್ಸ್ ಕಾಯುತ್ತಿದ್ದಾರೆ. ಭೇಟಿ ಆಗಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಈ ವೇಳೆ ಅನುಪಮಾ, ಪ್ರಶಾಂತ್ ಎಂಬಿಬ್ಬರು ಅಭಿಮಾನಿಗಳು (Darshan Fans) ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನಮಗೆ ಒಂದು ವರ್ಷದ ಹಿಂದೆ ಸುಳ್ಳು ಎಫ್ಐಆರ್ನಿಂದ ತೊಂದರೆ ಆಗಿತ್ತು. ಆಗ ದರ್ಶನ್ ಸರ್ ಬ್ಯುಸಿ ಆಗಿದ್ದರೂ ಕೂಡ ರಾತ್ರಿ 11 ಗಂಟೆಗೆ ಕರೆ ಮಾಡಿ ವಿಚಾರಿಸಿದರು. ಸಹಾಯ ಬೇಕಾದರೆ ಮಾಡ್ತೀನಿ ಎಂದರು. ಈಗ ದರ್ಶನ್ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದನ್ನು ಕೋರ್ಟ್ ತೀರ್ಮಾನಿಸುತ್ತದೆ. ಆ ರೀತಿ ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಆ ಅಭಿಮಾನದಿಂದ ನಾವು ಬಂದಿದ್ದೇವೆ’ ಎಂದು ಅನುಪಮಾ ಹೇಳಿದ್ದಾರೆ. ‘ದರ್ಶನ್ ಅವರು ಕರ್ನಾಟಕದ ಹೆಮ್ಮೆ. ಅವರ ಸಿನಿಮಾ ಗೆದ್ದಾಗ ಅವರ ಮನೆಗೆ ಹೋಗಿ ಭೇಟಿ ಆಗುವುದಷ್ಟೇ ಅಲ್ಲ. ಅವರು ಕಷ್ಟದಲ್ಲಿ ಇರುವಾಗ ಭೇಟಿ ಮಾಡಬೇಕು ಎನಿಸಿತು. ಹಾಗಾಗಿ ಬಂದಿದ್ದೇವೆ. ಆದರೆ ಭೇಟಿಗೆ ಅವಕಾಶ ಸಿಕ್ಕಿಲ್ಲ’ ಎಂದು ಪ್ರಶಾಂತ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.