ಶ್ರೀಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಆದರೆ ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯ ಭಾಗ: ಲಕ್ಷ್ಮಣ ಸವದಿ

Updated on: Jul 08, 2025 | 2:02 PM

ರಸ್ತೆ ಬೇಕಾ ಅನ್ನ ಬೇಕಾ ಅಂತ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದು, ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯೆನಿಸುತ್ತಿರುವುದರ ದ್ಯೋತಕವೇ ಅಂತ ಸವದಿಯವರನ್ನು ಕೇಳಿದಾಗ, ದೊಡ್ಡ ದೊಡ್ಡ ಯೋಜನೆಗಳನ್ನು ಜಾರಿಗೆ ತಂದಾಗ ಸರ್ಕಾರದ ಮೇಲೆ ಹೊರೆ ಬೀಳೋದು ಸಹಜವೇ, ಆದರೆ ಅನ್ನವಿಲ್ಲದ ಹೊಟ್ಟೆಗೆ ಮತ್ತು ಬಟ್ಟೆಯಿಲ್ಲದ ಮೈಗೆ ರಸ್ತೆ ಮುಖ್ಯನಾ ಆಥವಾ ಅನ್ನ ಮುಖ್ಯನಾ ಅಂತ ಯೋಚಿಸಬೇಕು ಎಂದು ಸವದಿ ಹೇಳಿದರು.

ಬೆಂಗಳೂರು, ಜುಲೈ 8: ಗ್ಯಾರಂಟಿ ಯೋಜನೆಗಳಿಂದ (guarantee schemes) ಜನರಲ್ಲಿ ಜಡತ್ವ ಆವರಿಸಿಕೊಳ್ಳುತ್ತಿದೆ ಎಂದು ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಶ್ರೀಗಳ ಬಗ್ಗೆ ಅಪಾರವಾದ ಶ್ರದ್ಧೆ ಮತ್ತು ಗೌರವ ಇದೆ, ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ಅದರೆ ಸರ್ಕಾರ ದುಡಿಯುವ ವರ್ಗ, ಬಡತನದಲ್ಲಿ ಬೆಂದಿರುವ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಚರಂಡಿಗಳ ನಿರ್ಮಾಣ, ದೊಡ್ಡದೊಡ್ಡ ಕಟ್ಟಡಗಳನ್ನು ನಿರ್ಮಿಸುವುದು ಮಾತ್ರ ಅಭಿವೃದ್ಧಿ ಅಲ್ಲ, ಹಸಿದ ಹೊಟ್ಟೆಗೆ ಹೊಟ್ಟೆ ತುಂಬಾ ಅನ್ನ ನೀಡುವುದು ಸಹ ಅಭಿವೃದ್ಧಿಯ ಭಾಗವಾಗಿದೆ, ಬಡವರು ದಿನವಿಡೀ ದುಡಿದರೂ ಹೊಟ್ಟೆ ತುಂಬ ಊಟ ಕಾಣದಂಥ ಸ್ಥಿತಿಯಿರುವಾಗ ತಮ್ಮ ಸರ್ಕಾರ ಅವರಿಗೆ ಊಟ ಒದಗಿಸುವ ವ್ಯವಸ್ಥೆ ಮಾಡಿದರೆ ಅದು ತಪ್ಪೇ? ಇಂಥ ವಿಷಯಗಳನ್ನು ಅನಾವಶ್ಯಕ ಚರ್ಚೆಗೆ ಎಳೆಯಬಾರದು ಎಂದು ಸವದಿ ಹೇಳಿದರು.

ಇದನ್ನು ಓದಿ:  ಉದ್ಯಮಿಗಳಿಗೆ ಹೋಗುತ್ತಿರುವ ಎಥನಾಲ್ ಹಣವನ್ನು ಕಬ್ಬು ಬೆಳೆಗಾರರಿಗೆ ಕೊಡಿಸುವಂತೆ ಯಡಿಯೂರಪ್ಪಗೆ ಲಕ್ಷ್ಮಣ ಸವದಿ ಸವಾಲು!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ