ನಾನು ಯಾವತ್ತೂ ಬಿಜೆಪಿಯನ್ನು ತೊರೆಯುವುದಿಲ್ಲ, ಸುಳ್ಳು ವದಂತಿಗಳನ್ನು ನಂಬಬೇಡಿ: ಪ್ರೀತಮ್ ಗೌಡ
ನಿಮಗೆ ಯಾರ ಕೆಲಸ ಚೆನ್ನಾಗಿ ಅನಿಸುತ್ತೋ ಅವರಿಗೆ ವೋಟು ಮಾಡಿ, ನನ್ನದೇನೂ ಅಭ್ಯಂತರವಿಲ್ಲ. ಆದರೆ ಜನರಿಗೆ ಸಹಾಯ ಮಾಡುವ ನನ್ನ ಪ್ರವೃತ್ತಿಯನ್ನು ಮಾತ್ರ ಶಂಕಿಸಬೇಡಿ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿದರು.
ಹಾಸನ: ಹಾಸನದ ಬಿಜೆಪಿ ಶಾಸಕ ಪ್ರೀತಮ್ ಜೆ ಗೌಡ (Preetham J Gowda) ಅವರು ಪಕ್ಷ ತೊರೆದು ಕಾಂಗ್ರೆಸ್ (Congress) ಸೇರುತ್ತಾರೆ ಅಂತ ದಟ್ಟವಾಗಿ ಹರಡಿದ್ದ ವದಂತಿಗಳಿಗೆ (rumours) ಖುದ್ದು ಶಾಸಕರೇ ತೆರೆ ಎಳೆದಿದ್ದಾರೆ. ಸೋಮವಾರ ಹಾಸನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತಾಡಿದ ಅವರು ಯಾವ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಅಂತ ಹೇಳಿದರು. ನಾನು ಹುಟ್ಟಿದಂದಿನಿಂದ ಬಿಜೆಪಿಯಲ್ಲಿದ್ದೇನೆ, ಮತ್ತು ಸಾಯುವರೆಗೆ ಇದರಲ್ಲೇ ಮುಂದುವರಿಯತ್ತೇನೆ ಎಂದು ಹೇಳಿದರು. ನಾನು ಮುಸ್ಲಿಂ ಜನರಿಗೆ ಸಹಾಯ ಮಾಡಿರುವುದು ಮತ್ತು ಮಾಡುತ್ತಿರುವುದು ಕಂಡು ಕಾಂಗ್ರೆಸ್ ಸೇರಲು ನಾನು ಇದನ್ನೆಲ್ಲ ಮಾಡುತ್ತಿದ್ದೇನೆ ಅಂತ ಆಡಿಕೊಳ್ಳುತ್ತಿದ್ದಾರೆ. ಆದರೆ ಅಂಥದ್ದೇನೂ ಇಲ್ಲ. ನನಗೆ ಸುಳ್ಳು ಹೇಳಿ ಅಭ್ಯಾಸವಿಲ್ಲ. ನೇರವಾಗಿ ಮಾತಾಡುವುದು ನನ್ನ ಸ್ವಭಾವ, ಹಾಗಾಗಿ ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಪ್ರೀತಮ್ ಗೌಡ ಹೇಳಿದರು.
ಜನರಿಂದ ಮತ ಗಿಟ್ಟಿಸಲು ನಾನು ಯಾವುದನ್ನೂ ಮಾಡುವುದಿಲ್ಲ. ನಾನು ಜನರಿಗೆ ಹೇಳುವುದಿಷ್ಟೇ. ನಾನು ಕೆಲಸ ಮಾಡಿದ್ದೇನೆ ಅಂತ ಅನಿಸಿದರೆ ಅಂದರೆ ಮಾತ್ರ ವೋಟು ಕೊಡಿ. ಇಲ್ಲ ಶಾಸಕರೇ ನಿಮ್ಮ ಕೆಲಸ ತೃಪ್ತಿದಾಯಕವಾಗಿಲ್ಲ ಅಂತ ನಿಮಗನಿಸಿದರೆ, ಜೆಡಿ(ಎಸ್) ಇಲ್ಲವೇ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆಂಬಲ ನೀಡಿ, ನಾನು ಖಂಡಿತ ಬೇಜಾರು ಮಾಡಿಕೊಳ್ಳಲ್ಲ ಎಂದು ಪ್ರೀತಮ್ ಗೌಡ ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿ(ಎಸ್) ನಾಯಕರೊಂದಿಗೆ ನನ್ನನ್ನು ತುಲನೆ ಮಾಡಿನೋಡಿ. ನಿಮಗೆ ಯಾರ ಕೆಲಸ ಚೆನ್ನಾಗಿ ಅನಿಸುತ್ತೋ ಅವರಿಗೆ ವೋಟು ಮಾಡಿ, ನನ್ನದೇನೂ ಅಭ್ಯಂತರವಿಲ್ಲ. ಆದರೆ ಜನರಿಗೆ ಸಹಾಯ ಮಾಡುವ ನನ್ನ ಪ್ರವೃತ್ತಿಯನ್ನು ಮಾತ್ರ ಶಂಕಿಸಬೇಡಿ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿದರು.
ಇದನ್ನೂ ಓದಿ: ಪ್ರೀತಮ್ ಗೌಡ ತಮ್ಮ ಉತ್ಸಾಹೀ ಯುವ ಮಿತ್ರ, ಸಚಿವ ಸ್ಥಾನ ಸಿಗದಿರುವುದಕ್ಕೆ ಅವರಲ್ಲಿ ಕೋಪವೇನೂ ಇಲ್ಲ ಎಂದ ಮುಖ್ಯಮಂತ್ರಿ ಬೊಮ್ಮಾಯಿ