ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ ಜನ ಹೇಳುವ ನೆಪಗಳು ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ಸ್ವಾರಸ್ಯಕರವಾಗಿರುತ್ತವೆ!

ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ ಜನ ಹೇಳುವ ನೆಪಗಳು ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ಸ್ವಾರಸ್ಯಕರವಾಗಿರುತ್ತವೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 15, 2022 | 9:15 PM

ಬಾಗಲಕೋಟೆಯ ವಿಡಿಯೋನಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಇಬ್ಬರು ಯುವಕರು ಬೈಕ್ ತೆಗೆದುಕೊಂಡು ಹೊರಬಂದಿದ್ದಾರೆ. ಪೊಲೀಸರು ತಡೆದು ನಿಲ್ಲಿಸಿ ಪಕ್ಕಕ್ಕೆ ಹಾಕು ಅಂತ ಹೇಳುವ ಮೊದಲು ಕರ್ಫ್ಯೂ ಇದ್ರೂ ಹೊರ ಬಂದಿದ್ದು ಯಾಕೆ, ಎಲ್ಲಿಗೆ ಹೋಗ್ತಿರೋದು ಅಂತ ಕೇಳಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಮತ್ತು ಡಾಕ್ಯುಮೆಂಟ್ಸ್ ಇಲ್ಲದೆ ಬೈಕ್ ಓಡಿಸುವವರು ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಹೇಳುವ ಕಾರಣಗಳನ್ನು ಮತ್ತು ನೆಪಗಳನ್ನು ಹೇಳುವುದು ನೀವು ಕೇಳಿಸಿಕೊಂಡಿದ್ದೀರಾ? ಅವರ ಕ್ರಿಯೇಟಿವಿಟಿ (creativity) ದಂಗುಬಡಿಸುತ್ತದೆ ಮಾರಾಯ್ರೇ. ಒಂದು ಪ್ರಸಂಗವನ್ನು ಕೇಳಿಸಿಕೊಂಡ ಬಳಿಕ ಬಾಗಲಕೋಟೆಯ ಈ ವಿಡಿಯೋಗೆ ಬರೋಣ. ಕಲಬುರಗಿಯಲ್ಲಿ ಒಮ್ಮೆ ಎಸ್ ಎಸ್ ಎಲ್ ಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಡ್ಯಾಡಿಯ ಬೈಕ್ ಓಡಿಸಿಕೊಂಡು ಬಂದು ಮುಖ್ಯರಸ್ತೆಯೊಂದರಲ್ಲಿ ಟ್ರಾಫಿಕ್ ಇನ್ಸ್​ಪೆಕ್ಟರ್ (traffic inspector) ಸಿಕ್ಕಿಬಿದ್ದ. 15ರ ಪೋರನ ಬಳಿ ಡಿಎಲ್ (DL) ಇರಲು ಸಾಧ್ಯವಿಲ್ಲ. ಆದರೆ ಬಚಾವಾಗಲು ಏನಾದರೂ ಹೇಳಬೇಕಲ್ಲ. ‘ಸರಾ, ನಂಗ್ ಹೋಗಾಕ್ ಬಿಡ್ರೀ. ಮೈಯಾಗ ಆರಾಮಿಲ್ಲ ದಾವಾಖಾನಿಗ್ (ಆಸ್ಪತ್ರೆ) ಹೋಗ್ಲತ್ತೀನ್ರೀ,’ ಅಂತ ತಡಬಡಿಸುತ್ತಾ ಹೇಳಿದ. ‘ಯಾಕಪ್ಪಾ, ಆರಾಮೇ ಕಾಣ್ಲತ್ತಿದ್ಯಲ್ಲ ಏನಾಗೇದ,’ ಅಂತ ಇನ್ಸ್​ಪೆಕ್ಟರ್ ಕೇಳಿದರು. ಹುಡುಗನಿಗೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ. ಮನೇಲಿ ಅವನ ಅಜ್ಜಿಗೆ ಬಿಪಿ ಇರೋದು ಅವರು ಮಾತ್ರೆ ತೆಗೆದುಕೊಳ್ಳೋದು ಅವನಿಗೆ ನೆನಪಿಗೆ ಬಂತು. ‘ಸರಾ ನಂಗ ಬಿಪಿ ಆಗೇದ್ರೀ!’ ಎಂದುಬಿಟ್ಟ. ಜೋರಾಗಿ ನಕ್ಕ ಇನ್ಸ್​ಪೆಕ್ಟರ್, ‘ಗಾಡಿ ಇಲ್ಲಿ ಬಿಟ್ಟು ನಡ್ಕೊತ್ ಮನೀಗ್ ಹೋಗು, ನಿನ್ ಬಿಪಿ ಕಡ್ಮಿ ಆಗ್ತದ, ನಿಮ್ ಬಾಬಾ (ತಂದೆ) ಅವ್ರಿಗ್ ಬಂದು ಗಾಡಿ ತಗೊಂಡ್ ಹೋಗಂತ ಹೇಳು,’ ಅಂತ ಹೇಳಿ ಕಳಿಸಿದರು.

ಸರಿ, ಬಾಗಲಕೋಟೆಯ ವಿಡಿಯೋನಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಇಬ್ಬರು ಯುವಕರು ಬೈಕ್ ತೆಗೆದುಕೊಂಡು ಹೊರಬಂದಿದ್ದಾರೆ. ಪೊಲೀಸರು ತಡೆದು ನಿಲ್ಲಿಸಿ ಪಕ್ಕಕ್ಕೆ ಹಾಕು ಅಂತ ಹೇಳುವ ಮೊದಲು ಕರ್ಫ್ಯೂ ಇದ್ರೂ ಹೊರ ಬಂದಿದ್ದು ಯಾಕೆ, ಎಲ್ಲಿಗೆ ಹೋಗ್ತಿರೋದು ಅಂತ ಕೇಳಿದ್ದಾರೆ.

ಅದಕ್ಕೆ ಬೈಕ್ ಓಡಿಸುತ್ತಿದ್ದ ಯುವಕ ನೀಡಿದ ಉತ್ತರ ಸ್ವಾರಸ್ಯಕರವಾಗಿದೆ. ಅವನು ಹೇಳಿದ್ದೇನು ಗೊತ್ತಾ? ಅವನ ನಾಯಿಯ ಹೆರಿಗೆ ಸಮಯ ಹತ್ತಿರವಾಗಿದೆಯಂತೆ, ಪಶುವೈದ್ಯರನ್ನ ಮನೆಗೆ ಕರೆದೊಯ್ಯಲು ಹೋಗುತ್ತಿದ್ದನಂತೆ!

ಇದನ್ನೂ ಓದಿ:   YouTube: ಯೂಟ್ಯೂಬ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವ ಟ್ರಿಕ್ ನಿಮಗೆ ಗೊತ್ತೇ?

Published on: Jan 15, 2022 09:13 PM