ಸಿಎಂ ವಿರುದ್ಧ ಪ್ರಾಸಿಕ್ಯೂಷನ್; ಕೆಲ ಬಿಜೆಪಿ ನಾಯಕರೂ ನಮ್ಮ ಹೋರಾಟದಲ್ಲಿ ಕೈಜೋಡಿಸಿದ್ದಾರೆ: ಸಂತೋಷ್ ಲಾಡ್
ರಾಜ್ಯಪಾಲರು ಕೇವಲ ಮುಖ್ಯಮಂತ್ರಿಯವರಿಗೆ ನೀಡಿದ ಸೈಟುಗಳಿಗೆ ಮಾತ್ರ ಯಾಕೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ? ಬೇರೆ 125 ಜನರಿಗೆ ನಿವೇಶನ ಹಂಚಿಕೆಯಾಗಿವೆ ಅವರಿಗ್ಯಾಕೆ ನೀಡಿಲ್ಲ? ಅದಕ್ಕೂ ಮಿಗಿಲಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸಿದ್ದರಾಮಯ್ಯ ಅವರಿಗೆ ಸೈಟುಗಳನ್ನು ನೀಡಲಾಗಿದೆ ಎಂದು ಸಂತೋಷ್ ಲಾಡ್ ಹೇಳಿದರು.
ಹುಬ್ಬಳ್ಳಿ: ಅಹಿಂದ ವರ್ಗಗಳ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಲಾಗಿದ ಬಿಜೆಪಿ ನಾಯಕರು ಅವರ ವಿರುದ್ಧ ಪಿತೂರಿ ನಡೆಸಿದ್ದಾರೆ ಮತ್ತು ರಾಜಕೀಯ ಷಡ್ಯಂತ್ರ ಹೂಡಿದ್ದಾರೆ, ಇದನ್ನು ಕಾಂಗ್ರೆಸ್ ಪಕ್ಷ ರಾಜಕೀಯವಾಗೇ ಎದುರಿಸಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿರುವ ಸಿದ್ದರಾಮಯ್ಯ ಶೋಷಿತ ವರ್ಗದವರ ನಾಯಕರಾಗಿ ಕಳಂಕರಹಿತ ರಾಜಕೀಯ ಬದುಕು ನಡೆಸಿದ್ದಾರೆ. ಅವರನ್ನು ಪದಚ್ಯುತಗೊಳಿಸಲು ರಾಜ್ಯದ ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಹುನ್ನಾರ ನಡೆಸಿದೆ. ಅದರೆ ರಾಜ್ಯದ ಜನತೆ, ಶಾಸಕರು ಮತ್ತು ಕೆಲ ಬಿಜೆಪಿ ನಾಯಕರು ಸಹ ಸಿದ್ದರಾಮಯ್ಯ ಅವರೊಂದಿಗಿದ್ದಾರೆ ಎಂದು ಲಾಡ್ ಹೇಳಿದರು. ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ, ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಹೋರಾಟ ನಡೆಸಲಿದ್ದಾರೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಾಸಿಕ್ಯೂಷನ್ಗೆ ಅನುಮತಿ: ಉಪವಾಸ ಸತ್ಯಾಗ್ರಹ ನಿರತ ಸಿದ್ದರಾಮಯ್ಯ ಅಭಿಮಾನಿ ಅಸ್ವಸ್ಥ