ಕ್ಯಾಬ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್ಡೇಟ್
ಅಗ್ರಿಗೇಟರ್ ಕ್ಯಾಬ್ ಕಂಪನಿಗಳ ಟಿಪ್ಸ್ ವಸೂಲಿ ನಿಯಮಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಓಲಾ, ಊಬರ್, ರ್ಯಾಪಿಡೋ ಆ್ಯಪ್ಗಳಲ್ಲಿ ಕಡ್ಡಾಯ ಟಿಪ್ಸ್ ಆಯ್ಕೆ ಇನ್ಮುಂದೆ ಇರುವುದಿಲ್ಲ. ಟ್ರಿಪ್ ಮುಗಿದ ನಂತರ ಗ್ರಾಹಕರು ಸ್ವಯಂಪ್ರೇರಿತವಾಗಿ ಟಿಪ್ಸ್ ನೀಡಲು ಅವಕಾಶವಿದ್ದು, ಅದು ನೇರವಾಗಿ ಚಾಲಕರಿಗೆ ತಲುಪುತ್ತದೆ. ಈ ನಿರ್ಧಾರದಿಂದ ಬೆಂಗಳೂರಿನ ಪ್ರಯಾಣಿಕರು ಮತ್ತು ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜನವರಿ 8: ಬೆಂಗಳೂರಿನಲ್ಲಿ ಆಟೋ ಮತ್ತು ಕ್ಯಾಬ್ ಸೇವೆಗಳಿಗೆ ಹೆಸರುವಾಸಿಯಾದ ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಮುಂತಾದ ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ಕಡ್ಡಾಯವಾಗಿ ಟಿಪ್ಸ್ ಪಡೆಯುವ ನೀತಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಇದುವರೆಗೆ, ಕ್ಯಾಬ್ ಬುಕ್ ಮಾಡುವಾಗ ಆ್ಯಪ್ಗಳಲ್ಲಿ ಪ್ರಯಾಣ ದರದ ಜೊತೆಗೆ 20, 40, 60 ರೂಪಾಯಿ ಟಿಪ್ಸ್ ನೀಡುವ ಆಯ್ಕೆ ಇದ್ದು, ಅದನ್ನು ಆಯ್ಕೆ ಮಾಡದಿದ್ದರೆ ಬೇಗನೆ ಕ್ಯಾಬ್ ಬುಕ್ ಆಗುತ್ತಿರಲಿಲ್ಲ. ಈ ಟಿಪ್ಸ್ ನೀಡಿದರೆ ವಾಹನಗಳು ಬೇಗ ಸಿಗುತ್ತವೆ ಎಂಬ ಅಲಿಖಿತ ನಿಯಮ ಗ್ರಾಹಕರ ಸುಲಿಗೆಗೆ ಕಾರಣವಾಗಿತ್ತು.
ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಅಪ್ಲಿಕೇಷನ್‌ಗಳಲ್ಲಿ ಹೆಚ್ಚುವರಿ ಟಿಪ್ಸ್ ಆಯ್ಕೆಯನ್ನು ಕಡ್ಡಾಯವಾಗಿ ನೀಡುವಂತಿಲ್ಲ. ಟ್ರಿಪ್ ಮುಗಿದ ನಂತರ ಗ್ರಾಹಕರು ಸ್ವಯಂಪ್ರೇರಿತವಾಗಿ ಟಿಪ್ಸ್ ನೀಡಬಹುದು. ಈ ಟಿಪ್ಸ್ ಸಂಪೂರ್ಣವಾಗಿ ಚಾಲಕರ ಖಾತೆಗೆ ನೇರವಾಗಿ ಹೋಗಬೇಕು, ಇದರಲ್ಲಿ ಅಗ್ರಿಗೇಟರ್ ಕಂಪನಿಗಳು ಯಾವುದೇ ಪಾಲನ್ನು ಕೇಳುವಂತಿಲ್ಲ. ಈ ನಿರ್ಧಾರದಿಂದ ಬೆಂಗಳೂರಿನ ಪ್ರಯಾಣಿಕರು ಮತ್ತು ಆಟೋ, ಕ್ಯಾಬ್ ಚಾಲಕರು ಸಂತಸಗೊಂಡಿದ್ದಾರೆ. ಅಲ್ಲದೆ, ಮಹಿಳಾ ಸುರಕ್ಷತೆಗಾಗಿ ಮಹಿಳಾ ಚಾಲಕರ ಆಯ್ಕೆಗೂ ಅವಕಾಶ ನೀಡುವಂತೆ ಸೂಚಿಸಲಾಗಿದೆ.
ಈ ಹೊಸ ನಿಯಮಕ್ಕೆ ಪ್ರಯಾಣಿಕರು ವ್ಯಾಪಕವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಕೆಲಸಕ್ಕೆ ತೆರಳುವವರಿಗೆ 10, 20, 30 ರೂಪಾಯಿ ಟಿಪ್ಸ್ ನೀಡುವುದು ಆರ್ಥಿಕವಾಗಿ ಕಷ್ಟಕರವಾಗಿತ್ತು. ಇದು ಅವರ ಜೇಬಿಗೆ ಹೊರೆಯಾಗುತ್ತಿತ್ತು ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಿರುವುದು ಬಹಳ ಅವಶ್ಯಕವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪರಿಷ್ಕೃತ ನಿಯಮಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
