ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು! ಮೂರೇ ದಿನದಲ್ಲಿ 5 ಲಕ್ಷ ಭಕ್ತರ ಭೇಟಿ, 4.50 ಕೋಟಿ ರೂ. ಆದಾಯ
ಹಾಸನಾಂಬೆ ದೇಗುಲದಲ್ಲಿ ವಾರ್ಷಿಕ ದರ್ಶನ ಪ್ರಾರಂಭವಾಗಿ ಮೂರು ದಿನಗಳಾಗಿವೆ. ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, 4.5 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಲಕ್ಷಾಂತರ ಭಕ್ತರಿಂದ ಕಿಲೋಮೀಟರ್‌ಗಟ್ಟಲೆ ಸರದಿ ಸಾಲು ನಿರ್ಮಾಣವಾಗಿದೆ. ಶಕ್ತಿ ಯೋಜನೆ ಅಡಿ ಆಗಮಿಸಿದ ಮಹಿಳೆಯರಿಗೆ ಬಸ್ ಸಮಸ್ಯೆ ಎದುರಾಗಿದ್ದು, ದರ್ಶನದ ಪಾಸ್ ಹಂಚಿಕೆ ವಿಚಾರದಲ್ಲಿ ರಾಜಕೀಯ ಜಟಾಪಟಿ ನಡೆದಿರುವುದು ಗಮನಾರ್ಹ.
ಹಾಸನ, ನವೆಂಬರ್ 1: ಹಾಸನಾಂಬೆ ದೇಗುಲದಲ್ಲಿ ವಾರ್ಷಿಕ ದರ್ಶನ ನವೆಂಬರ್ 29ರಂದು ಪ್ರಾರಂಭವಾಗಿದ್ದು, ಅಂದಿನಿಂದ ಭಕ್ತಸಾಗರವೇ ಹರಿದುಬರುತ್ತಿದೆ. ದರ್ಶನ ಆರಂಭವಾಗಿ ಕೇವಲ ಮೂರೇ ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಟಿಕೆಟ್ ಮಾರಾಟ ಮತ್ತು ಲಡ್ಡು ಪ್ರಸಾದದಿಂದ ದೇಗುಲಕ್ಕೆ 4.5 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ದೇವಿಯ ದರ್ಶನಕ್ಕಾಗಿ ಕಿಲೋಮೀಟರ್‌ಗಟ್ಟಲೆ ಸರದಿ ಸಾಲು ನಿರ್ಮಾಣವಾಗಿದೆ. ಸಾವಿರ ರೂಪಾಯಿ ಟಿಕೆಟ್ ಪಡೆದವರಿಗೂ ಸಾಲು ತಪ್ಪಿಲ್ಲ. ಜನದಟ್ಟಣೆ ಹೆಚ್ಚಿದ ಕಾರಣ, ಪ್ರತಿದಿನ ಬೆಳಗಿನ ಜಾವ 3ರಿಂದ 6 ಗಂಟೆಯವರೆಗೆ ನೈವೇದ್ಯ ಪೂಜೆಗಾಗಿ ದರ್ಶನ ನಿಲ್ಲಿಸುವ ಬದಲು, ಪೂಜೆಯ ನಡುವೆಯೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ರಾಜ್ಯದ ನಾನಾ ಮೂಲೆಗಳಿಂದ ಶಕ್ತಿ ಯೋಜನೆ ಬಳಸಿ ಬಂದ ಮಹಿಳೆಯರಿಗೆ ಸಾರಿಗೆ ಬಸ್‌ಗಳ ಕೊರತೆಯಿಂದ ಪರದಾಡುವಂತಾಗಿದೆ. ಮಾಜಿ ಸಚಿವ ರೇವಣ್ಣ ಅವರು ತಮಗೆ ಪಾಸ್ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸಂಸದರ ಮನೆಗಳಿಗೆ ಪಾಸ್‌ಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವಲಿಂಗೇಗೌಡ, ರಾಜಕೀಯ ಬೇಡ ಎಂದು ಹೇಳಿ, ಜಿಲ್ಲಾಡಳಿತಕ್ಕೆ ಪಾಸ್‌ಗಳ ಬಗ್ಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

