ಹಾಸನಾಂಬಾ ದರ್ಶನೋತ್ಸವ 2026: ಗೆಳತಿ ಜೊತೆ ಬಂದು ಹಾಸನಾಂಬೆ ದರ್ಶನ ಪಡೆದ ಮುಸ್ಲಿಂ ಮಹಿಳೆ!
ಸಕಲೇಶಪುರದ ಮುಸ್ಲಿಂ ಮಹಿಳೆ ಹಸೀನಾ ಲತೀಫ್ ಅವರು ತಮ್ಮ ಗೆಳತಿ ದೀಪಾ ಜೊತೆ ಹಾಸನಾಂಬೆ ದರ್ಶನ ಪಡೆದರು. ಕಳೆದ ಐದು ವರ್ಷಗಳಿಂದ ನಿರಂತರವಾಗಿ ದೇವಿಯ ಅನುಗ್ರಹ ಪಡೆಯುತ್ತಿರುವ ಇವರು, ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ದೇಗುಲದಲ್ಲಿ ಭಕ್ತರಿಗೆ ಸುರಕ್ಷತಾ ಕ್ರಮಗಳು ಹಾಗೂ ತ್ವರಿತ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹಾಸನ, ನವೆಂಬರ್ 03: ಹಾಸನಾಂಬ ದರ್ಶನೋತ್ಸವದ ಐದನೇ ದಿನವೂ ಭಕ್ತರು ತಾಯಿಯನ್ನು ನೋಡಲು ಕಿಕ್ಕಿರಿದು ಸೇರುತ್ತಿದ್ದಾರೆ. ಅದರಲ್ಲಿ ವಿಶೇಷವೆಂಬಂತೆ ಹಸೀನಾ ಲತೀಫ್ ಎಂಬ ಮುಸ್ಲಿಂ ಮಹಿಳೆಯೂ ದೇವಿಯ ದರ್ಶನ ಪಡೆದು ಸೌಹಾರ್ದತೆಯನ್ನು ಸಾರಿದ್ದಾರೆ. ಸಕಲೇಶಪುರ ನಿವಾಸಿಯಾದ ಇವರು, ಮೈಸೂರಿನ ತಮ್ಮ ಗೆಳತಿ ದೀಪಾ ಅವರೊಂದಿಗೆ ಹಾಸನಾಂಬೆ ದೇಗುಲಕ್ಕೆ ಆಗಮಿದ್ದಾರೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ದೇವಿಯ ದರ್ಶನ ಪಡೆಯುತ್ತಿರುವ ಹಸೀನಾ ಲತೀಫ್ ಅವರು, ತಮ್ಮ ಈ ಭೇಟಿಯ ಮೂಲಕ ಭಾವೈಕ್ಯತೆಯ ಸಂದೇಶವನ್ನು ಸಾರಿದ್ದಾರೆ. ಇವರು ಗೆಳತಿ ಜೊತೆ ಮಡಿಲಕ್ಕಿ ಸಮೇತ ಆಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ.
ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಪ್ರವೇಶ ದ್ವಾರದ ಹೊಸ್ತಿಲಿಗೆ ಬಾಗಿ ನಮಸ್ಕರಿಸುವುದನ್ನು ತಪ್ಪಿಸಲು ಕೋರಲಾಗಿದೆ, ಏಕೆಂದರೆ ಇದರಿಂದ ಹಿಂದಿರುವ ಭಕ್ತರು ಬೀಳುವ ಸಾಧ್ಯತೆ ಇರುತ್ತದೆ. ಅಲ್ಲದೆ, ಭಕ್ತರು ತಮ್ಮ ಒಡವೆಗಳು, ಬೆಲೆಬಾಳುವ ವಸ್ತುಗಳು, ಪರ್ಸ್ ಮತ್ತು ಮೊಬೈಲ್ ಫೋನ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
