ಹಾಸನ: ಹಾಸನಾಂಬ ದರ್ಶನ ಮುಗಿಸಿ ಹೋಗುತ್ತಿದ್ದವರಿಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು, ಮಹಿಳೆ ಸ್ಥಿತಿ ಗಂಭೀರ
ಆ ದಂಪತಿ ಮಗಳ ಸಮೇತ ಶಕ್ತಿ ದೇವತೆ ಹಾಸನಾಂಬೆಯ ದರ್ಶನ ಮುಗಿಸಿಕೊಂಡು ವಾಪಸಾಗುತ್ತಿದ್ದರು. ಆದರೆ, ಜವರಾಯ ಆ ಕಾರಿನ ರೂಪದಲ್ಲಿ ಅವರ ಬಳಿ ಬಂದಿದ್ದ. ನಡೆದುಕೊಂಡು ಹೋಗುತ್ತಿದ್ದ ಅಪ್ಪ ಮಗಳು ಕಾರು ಗುದ್ದಿಕೊಂಡು ಹೋದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದರೆ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಸನ, ನವೆಂಬರ್ 1: ಶಕ್ತಿ ದೇವತೆ ಹಾಸನಾಂಬೆಯ ದರ್ಶನ ಮುಗಿಸಿ ನಡೆದುಕೊಂಡು ತೆರಳುತ್ತಿದ್ದ ಭಕ್ತರಿಗೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ದಾರುಣ ಘಟನೆ ಹಾಸನದ ತಣ್ಣೀರಹಳ್ಳದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ತಂದೆ ಕುಮಾರ (38), ಮಗಳು ಕಾವ್ಯ (12) ಮೃತ ದುರ್ದೈವಿಗಳು. ಕುಮಾರ ಅವರ ಪತ್ನಿ ಪುಟ್ಟಮ್ಮ ಸ್ಥಿತಿ ಗಂಭೀರವಾಗಿದೆ.
ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಎನ್ಎಚ್ಪುರ ಗ್ರಾಮದ ಕುಮಾರ, ಗುರುವಾರ ರಾತ್ರಿ ಪತ್ನಿ ಪುಟ್ಟಮ್ಮ, ಮಗಳು ಕಾವ್ಯ ಜೊತೆ ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದರು. ಹಾಸನಾಂಬೆ ದೇವಿ ದರ್ಶನ ಪಡೆದು ವಿಜಯನಗರದಲ್ಲಿರುವ ಸಂಬಂಧಿಕರ ಮನೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿಹೊಡೆದಿದೆ. ಸ್ಥಳದಲ್ಲೇ ಕುಮಾರ ಹಾಗೂ ಕಾವ್ಯ ಮೃತಪಟ್ಟಿದ್ದಾರೆ. ಗಾಯಾಳು ಪುಟ್ಟಮ್ಮನ ಸ್ಥಿತಿ ಗಂಭೀರವಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ.
ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ