ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಚಿಕ್ಕಮಗಳೂರಿನ ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಾಲಯವು 1200 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿ ನಿತ್ಯವೂ ಸಂಸ್ಕೃತದ ಬದಲು ಕನ್ನಡದಲ್ಲೇ ಪೂಜೆ, ಮಂತ್ರಘೋಷಗಳು ನಡೆಯುತ್ತವೆ. ವಿಶಿಷ್ಟವಾಗಿ, ಇಲ್ಲಿ ಸೀತಾಮಾತೆಯು ರಾಮನ ಬಲಭಾಗದಲ್ಲಿ ನಿಂತು ದರ್ಶನ ನೀಡುತ್ತಾಳೆ. ಕನ್ನಡ ಸಂಸ್ಕೃತಿಯನ್ನು ಆಚರಿಸುವ ಈ ದೇವಾಲಯವು ರಾಜ್ಯದ ಹೆಮ್ಮೆಯಾಗಿದೆ.
ಚಿಕ್ಕಮಗಳೂರು: ಕನ್ನಡದ ಹೆಮ್ಮೆಯನ್ನು ಸಾರುವ ಒಂದು ವಿಶೇಷ ದೇವಾಲಯ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಅದುವೇ ಪುರಾಣ ಪ್ರಸಿದ್ಧ ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಾಲಯ. 1200 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ನಿತ್ಯವೂ ಕನ್ನಡದಲ್ಲೇ ಅರ್ಚನೆ, ಶ್ಲೋಕ ಹಾಗೂ ಮಂತ್ರಘೋಷಗಳನ್ನು ಹೇಳಲಾಗುತ್ತದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಪೂಜೆಗಳು ನಡೆಯುತ್ತವೆ. ಆದರೆ, ಹಿರೇಮಗಳೂರಿನ ಈ ದೇವಾಲಯವು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುತ್ತದೆ. ಈ ದೇವಾಲಯದ ಮತ್ತೊಂದು ವಿಶಿಷ್ಟತೆ ಎಂದರೆ, ಇಲ್ಲಿ ಸೀತಾಮಾತೆಯು ರಾಮನ ಬಲಭಾಗದಲ್ಲಿ ನಿಂತು ದರ್ಶನ ನೀಡುತ್ತಾಳೆ. ಸಾಧಾರಣವಾಗಿ ಸೀತೆ ರಾಮನ ಎಡಭಾಗದಲ್ಲಿ ಇರುತ್ತಾಳೆ. ಇದರೊಂದಿಗೆ ರಾಮನ ಎಡಭಾಗದಲ್ಲಿ ಲಕ್ಷ್ಮಣನ ವಿಗ್ರಹವನ್ನು ಕಾಣಬಹುದು. ವಿಶ್ವದಲ್ಲೇ ಬೆರಳಣಿಕೆಯಷ್ಟು ದೇವಾಲಯಗಳಲ್ಲಿ ಮಾತ್ರ ಇಂತಹ ವಿಶೇಷ ವಿಗ್ರಹ ವಿನ್ಯಾಸವನ್ನು ನೋಡಬಹುದಾಗಿದೆ. ಪರಶುರಾಮರ ನೆನಪಿಗಾಗಿ ಚಾಲುಕ್ಯರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಕನ್ನಡದ ಆರಾಧಕರಾದ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ಕನ್ನಡದ ಪೂಜಾ ಕೈಂಕರ್ಯಗಳು ನೆರವೇರುತ್ತಿರುವುದು ಈ ದೇವಾಲಯದ ಹೆಗ್ಗಳಿಕೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

