ಅಮಿತ್ ಶಾ 2 ವರ್ಷ ಗುಜರಾತ್ ತೊರೆದಿದ್ದೇಕೆ?; 15 ವರ್ಷದ ಹಿಂದಿನ ಕಾರಣ ಬಿಚ್ಚಿಟ್ಟ ಗೃಹ ಸಚಿವ
ನನ್ನ ಜಾಮೀನು ಅರ್ಜಿ 2 ವರ್ಷಗಳ ಕಾಲ ನಡೆಯಿತು ಎಂದಿರುವ ಗೃಹ ಸಚಿವ ಅಮಿತ್ ಶಾ ಅವರು 2 ವರ್ಷಗಳ ಕಾಲ ತಾವು ಗುಜರಾತ್ ತೊರೆದಿದ್ದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ANI ಜೊತೆ ಮಾತನಾಡಿದ ಅಮಿತ್ ಶಾ, ತಮ್ಮ ಜಾಮೀನು ಅರ್ಜಿ ಎರಡು ವರ್ಷಗಳ ಕಾಲ ನಡೆಯಿತು. ಇದು ಸಾಮಾನ್ಯವಾಗಿ ದೀರ್ಘ ಅವಧಿಯಾಗಿದೆ, ಏಕೆಂದರೆ ಅಂತಹ ಅರ್ಜಿಗಳು ಸಾಮಾನ್ಯವಾಗಿ 11 ದಿನಗಳಲ್ಲಿ ಮುಕ್ತಾಯಗೊಳ್ಳುತ್ತವೆ ಎಂದಿದ್ದಾರೆ.
ನವದೆಹಲಿ, ಆಗಸ್ಟ್ 25: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದ ತನಿಖೆ ನಡೆಯುವಾಗ ಆಗ ಗುಜರಾತಿನ ಗೃಹ ಸಚಿವರಾಗಿದ್ದ ಅಮಿತ್ ಶಾ (Amit Shah) ರಾಜೀನಾಮೆ ನೀಡಿ 2 ವರ್ಷ ಗುಜರಾತ್ ತೊರೆದು ಬೇರೆಡೆ ನೆಲೆಸಿದ್ದರು. ಇದಕ್ಕೆ ಕಾರಣವೇನೆಂಬುದರ ಬಗ್ಗೆ ಅಮಿತ್ ಶಾ ಆಸಕ್ತಿಕರ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ದೀರ್ಘಕಾಲದ ಕಾನೂನು ಹೋರಾಟದಿಂದಾಗಿ 2 ವರ್ಷಗಳ ಕಾಲ ಗುಜರಾತ್‌ನಿಂದ ದೂರ ಉಳಿಯಬೇಕಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗಪಡಿಸಿದ್ದಾರೆ.
“ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಅಫ್ತಾಬ್ ಆಲಂ ಅವರ ಕೃಪೆಯಿಂದ ನನ್ನ ಜಾಮೀನು ಅರ್ಜಿ 2 ವರ್ಷಗಳ ಕಾಲ ನಡೆಯಿತು. ಹೆಚ್ಚೆಂದರೆ ಜಾಮೀನು ಅರ್ಜಿ 11 ದಿನಗಳವರೆಗೆ ಇರುತ್ತದೆ. ಆದರೆ ನನ್ನ ವಿಷಯದಲ್ಲಿ 2 ವರ್ಷ ನಡೆಯಿತು. ನಾನು ಸಚಿವನಾಗಿದ್ದರಿಂದ ನಾನು ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂದು ನ್ಯಾಯಮೂರ್ತಿ ಆತಂಕ ವ್ಯಕ್ತಪಡಿಸಿದ್ದರು. ಆಗ ನಮ್ಮ ವಕೀಲರು ನಿಮಗೆ ಈ ಭಯವಿದ್ದರೆ, ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ನಮ್ಮ ಕಕ್ಷಿದಾರ ಗುಜರಾತ್‌ನ ಹೊರಗೆ ಇರುತ್ತಾರೆ ಎಂದು ಹೇಳಿದರು. ಹೀಗಾಗಿ, ನಾನೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಗುಜರಾತ್ ರಾಜ್ಯವನ್ನು ತೊರೆದಿದ್ದೆ. ಭಾರತದ ಇತಿಹಾಸದಲ್ಲಿ ಯಾರ ಜಾಮೀನು ಅರ್ಜಿಯೂ 2 ವರ್ಷಗಳ ಕಾಲ ಇರಲಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

