ಬಂಧನಕ್ಕೂ ಮೊದಲೇ ನಾನು ರಾಜೀನಾಮೆ ನೀಡಿದ್ದೆ; ಕಾಂಗ್ರೆಸ್ ನಾಯಕರಿಗೆ ಅಮಿತ್ ಶಾ ತಿರುಗೇಟು
ಕ್ರಿಮಿನಲ್ ಕೇಸ್ನಲ್ಲಿ ಪ್ರಧಾನಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಗಳ ಸಚಿವರು ಬಂಧನಕ್ಕೆ ಒಳಗಾದರೆ ಅವರನ್ನು ಆ ಹುದ್ದೆಯಿಂದ ವಜಾ ಮಾಡುವ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ. 30 ದಿನಗಳ ಕಾಲ ಬಂಧನದಲ್ಲಿದ್ದರೆ ಪ್ರಧಾನಿ, ಸಚಿವರು ಅಥವಾ ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನು ಅಮಿತ್ ಶಾ ಮಂಡಿಸಿದರು. ಈ ವೇಳೆ ಅಮಿತ್ ಶಾ ಕೂಡ ಬಂಧನವಾಗಿದ್ದ ವಿಚಾರ ಪ್ರಸ್ತಾಪವಾಯಿತು. ಏನಿದು ಘಟನೆ?

ನವದೆಹಲಿ, ಆಗಸ್ಟ್ 20: ಗಂಭೀರ ಆರೋಪಕ್ಕೆ ಒಳಗಾಗಿ 30 ದಿನಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದರೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರನ್ನು ಅವರ ಸ್ಥಾನದಿಂದ ವಜಾಗೊಳಿಸಬಹುದು ಎಂಬ ತಿದ್ದುಪಡಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಮಂಡಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಈ ವೇಳೆ ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್ (KC Venugopal) ಎದ್ದುನಿಂತು ಅಮಿತ್ ಶಾ ಅವರ ಹಳೆಯ ಪ್ರಕರಣವನ್ನು ನೆನಪಿಸಿದರು. “ರಾಜಕೀಯದಲ್ಲಿ ನೈತಿಕತೆಯನ್ನು ತರಲು ಬಿಜೆಪಿಯವರು ಹೀಗೆ ಹೇಳುತ್ತಿದ್ದಾರೆ. ಅಮಿತ್ ಶಾ ಗುಜರಾತಿನ ಗೃಹ ಸಚಿವರಾಗಿದ್ದಾಗಲೇ ಜೈಲಿಗೆ ಹೋಗಿದ್ದರು. ಅವರು ನೈತಿಕತೆ ಆಧಾರದ ಮೇಲೆ ರಾಜೀನಾಮೆ ನೀಡಿದ್ದಾರಾ?” ಎಂದು ಕೆ.ಸಿ ವೇಣುಗೋಪಾಲ್ ಪ್ರಶ್ನಿಸಿದರು.
ಇದಕ್ಕೆ ಸದನದಲ್ಲಿ ಎದ್ದುನಿಂತು ಪ್ರತಿಕ್ರಿಯಿಸಿದ ಅಮಿತ್ ಶಾ ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು. ಆದರೂ ನೈತಿಕತೆಯ ಆಧಾರದ ಮೇಲೆ ಬಂಧನಕ್ಕೂ ಮೊದಲೇ ನಾನು ಗುಜರಾತ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನ್ಯಾಯಾಲಯಗಳಿಂದ ಎಲ್ಲಾ ಆರೋಪಗಳಿಂದ ಮುಕ್ತನಾಗುವವರೆಗೆ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ವಹಿಸಿಕೊಂಡಿರಲಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಿದ್ದುಪಡಿ ಮಸೂದೆಯ ಪೇಪರ್ ಹರಿದು ಅಮಿತ್ ಶಾ ಮೇಲೆಸೆದ ವಿರೋಧ ಪಕ್ಷಗಳ ಸಂಸದರು
ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025 ಸೇರಿದಂತೆ ಅಮಿತ್ ಶಾ ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದ ಸ್ವಲ್ಪ ಸಮಯದ ನಂತರ ಈ ವಾಗ್ವಾದ ನಡೆಯಿತು. ಭ್ರಷ್ಟಾಚಾರ ಅಥವಾ ಗಂಭೀರ ಅಪರಾಧ ಆರೋಪಗಳನ್ನು ಎದುರಿಸುತ್ತಿರುವ ಪ್ರಧಾನಿ ಅಥವಾ ಮುಖ್ಯಮಂತ್ರಿಗಳನ್ನು ಸತತ 30 ದಿನಗಳವರೆಗೆ ಬಂಧನದಲ್ಲಿದ್ದರೆ ಅವರನ್ನು ತೆಗೆದುಹಾಕಲು ಈ ಮಸೂದೆ ಅವಕಾಶ ನೀಡುತ್ತದೆ.
KC Venugopal: Amit Shah was Home Minister of Gujarat and he was arrested. Don’t teach us morality.
Amit Shah: Despite being framed in a fake case, I had resigned and didn’t hold a single Constitutional post before acquittal. You’ll teach me morality?
— Aditya Raj Kaul (@AdityaRajKaul) August 20, 2025
2010ರಲ್ಲಿ ಅಮಿತ್ ಶಾ ಬಂಧನ:
ಜುಲೈ 2010ರಲ್ಲಿ ಆಗಿನ ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ದರೋಡೆಕೋರ ಸೊಹ್ರಾಬುದ್ದೀನ್ ಶೇಖ್, ಅವರ ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿ ಅವರ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿತ್ತು. ಸಿಬಿಐ ಫೋನ್ ದಾಖಲೆಗಳು ಮತ್ತು ಇತರ ಪುರಾವೆಗಳನ್ನು ಉಲ್ಲೇಖಿಸಿ ಅಮಿತ್ ಶಾ ಅವರನ್ನು ಈ ಪ್ರಕರಣದಲ್ಲಿ ಆರೋಪಿಯೆಂದು ಹೇಳಿ ಬಂಧಿಸಿತ್ತು. ಆಗ ತಮ್ಮ ಬಂಧನಕ್ಕೆ ಮುಂಚಿತವಾಗಿ ಅಮಿತ್ ಶಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ವರ್ಷದ ಕೊನೆಯಲ್ಲಿ ಜಾಮೀನು ಪಡೆಯುವ ಮೊದಲು ಅವರನ್ನು ಸಬರಮತಿ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಡಿಸೆಂಬರ್ 2014ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಅಮಿತ್ ಶಾ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




