AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಿಯ ಬ್ಲಾಕ್ ಉಪರಾಷ್ಟ್ರಪತಿ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಳೆ ನಾಮಪತ್ರ ಸಲ್ಲಿಕೆ

ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಇಂದು ಪ್ರಧಾನಿ ನರೇಂದ್ರ ಮೋದಿ, ಚಿರಾಗ್ ಪಾಸ್ವಾನ್, ಎಚ್​ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮಿತ್ರಪಕ್ಷಗಳ ನಾಯಕರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಇಂಡಿಯ ಬ್ಲಾಕ್‌ನ ಉಪರಾಷ್ಟ್ರಪತಿ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಸಲಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯನ್ನು ಸೆಪ್ಟೆಂಬರ್ 9ರಂದು ನಡೆಸಲಾಗುವುದು.

ಇಂಡಿಯ ಬ್ಲಾಕ್ ಉಪರಾಷ್ಟ್ರಪತಿ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಳೆ ನಾಮಪತ್ರ ಸಲ್ಲಿಕೆ
Sudershan Reddy With India Leaders
ಸುಷ್ಮಾ ಚಕ್ರೆ
|

Updated on: Aug 20, 2025 | 8:55 PM

Share

ನವದೆಹಲಿ, ಆಗಸ್ಟ್ 20: ಇಂದು ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ (CP Radhakrishnan) ನಾಮಪತ್ರ ಸಲ್ಲಿಸಿದ್ದಾರೆ. ಇಂಡಿಯ ಬ್ಲಾಕ್‌ನ ಉಪರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ (Sudershan Reddy) ನಾಳೆ (ಗುರುವಾರ) ಬೆಳಿಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಅವರು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಇಂದು ದೆಹಲಿಯಲ್ಲಿ ಸಂಸತ್ ಸದಸ್ಯರೊಂದಿಗೆ ಸಭೆ ನಡೆಸಿದರು. ಸಂವಿಧಾನ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಈ ಸಭೆ ನಡೆದಿದ್ದು, ಇದರಲ್ಲಿ ಇಂಡಿಯಾ ಬ್ಲಾಕ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದರು ಸೇರಿದ್ದರು. ವರದಿಯ ಪ್ರಕಾರ, ಈ ಸಭೆಯಲ್ಲಿ ಇಂಡಿಯ ಬ್ಲಾಕ್ ಸದಸ್ಯರಿಗೆ ಸುದರ್ಶನ್ ರೆಡ್ಡಿಯವರನ್ನು ಪರಿಚಯ ಮಾಡಿಕೊಡಲಾಯಿತು.

ಬಿ. ಸುದರ್ಶನ್ ರೆಡ್ಡಿ ಯಾರು?:

ಇಂಡಿಯ ಬ್ಲಾಕ್​ನ ಉಪರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ. ಅವರು 1946ರ ಜುಲೈ 8ರಂದು ಆಂಧ್ರಪ್ರದೇಶದಲ್ಲಿ ಜನಿಸಿದರು. ಬಿಎ ಮತ್ತು ಎಲ್‌ಎಲ್‌ಬಿ ಮುಗಿಸಿದ ನಂತರ ಅವರು ಡಿಸೆಂಬರ್ 27, 1971ರಂದು ಆಂಧ್ರಪ್ರದೇಶದ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ಸೇರಿಕೊಂಡರು. ಅವರು ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ರಿಟ್ ಮತ್ತು ಸಿವಿಲ್ ವಿಷಯಗಳಲ್ಲಿ ತಮ್ಮ ಪ್ರಾಕ್ಟೀಸ್ ಮಾಡಿದರು. ನಂತರ 1988 ಮತ್ತು 1990ರ ನಡುವೆ ಸರ್ಕಾರಿ ವಕೀಲರಾಗಿ ಮತ್ತು ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ಕೌನ್ಸಿಲ್ ಆಗಿ ಸೇವೆ ಸಲ್ಲಿಸಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ಕೌನ್ಸಿಲ್ ಆಗಿಯೂ ಕೆಲಸ ಮಾಡಿದರು.

ಇದನ್ನೂ ಓದಿ: Video: ಪ್ರಧಾನಿ ಮೋದಿ, ಎನ್​​ಡಿಎ ನಾಯಕರ ಸಮ್ಮುಖದಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ಸಿಪಿ ರಾಧಾಕೃಷ್ಣನ್ ನಾಮಪತ್ರ ಸಲ್ಲಿಕೆ

ಸುದರ್ಶನ್ ರೆಡ್ಡಿ ಗೋವಾದ ಮೊದಲ ಲೋಕಾಯುಕ್ತರಾಗಿದ್ದರು. ಅವರನ್ನು ಮೇ 2, 1995ರಂದು ಆಂಧ್ರಪ್ರದೇಶ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಡಿಸೆಂಬರ್ 5, 2005ರಂದು ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಅವರನ್ನು ಜನವರಿ 12, 2007ರಂದು ಭಾರತದ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡಲಾಯಿತು. ಅಲ್ಲಿ ಅವರು ಜುಲೈ 8, 2011ರಂದು ನಿವೃತ್ತರಾಗುವವರೆಗೆ ಸೇವೆ ಸಲ್ಲಿಸಿದರು

ಸಿ.ಪಿ ರಾಧಾಕೃಷ್ಣನ್ ಯಾರು?:

ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ತಮಿಳುನಾಡಿನ ತಿರುಪ್ಪೂರಿನಲ್ಲಿ 1957 ರ ಅಕ್ಟೋಬರ್ 20 ರಂದು ಜನಿಸಿದ ರಾಧಾಕೃಷ್ಣನ್ ಅವರ ರಾಜಕೀಯ ಜೀವನವು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್​​ಎಸ್​ಎಸ್​) ಮತ್ತು ಜನಸಂಘದೊಂದಿಗೆ ಆರಂಭವಾಯಿತು. ಸಿಪಿ ರಾಧಾಕೃಷ್ಣನ್ 70ರ ದಶಕದಲ್ಲಿ ಆರ್​ಎಸ್​ಎಸ್​​ನಲ್ಲಿ ಸಕ್ರಿಯರಾಗಿದ್ದರು. 1994 ರಲ್ಲಿ ಅವರನ್ನು ತಮಿಳುನಾಡು ಬಿಜೆಪಿಯ ಕಾರ್ಯದರ್ಶಿಯಾಗಿಯೂ ನೇಮಿಸಲಾಯಿತು. ರಾಧಾಕೃಷ್ಣನ್ 2024ರ ಜುಲೈ 31ರಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿ 18, 2023 ರಿಂದ ಜುಲೈ 30, 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಅವರು ತೆಲಂಗಾಣ ಮತ್ತು ಪುದುಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು.

ಇದನ್ನೂ ಓದಿ: Vice President Election: ರಾಧಾಕೃಷ್ಣನ್ ವರ್ಸಸ್ ಸುದರ್ಶನ್ ರೆಡ್ಡಿ; ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಗೆಲ್ಲುವ ಸಾಧ್ಯತೆ ಹೆಚ್ಚು?

ಫೆಬ್ರವರಿ 18, 2023ರಂದು ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ತಮ್ಮ ಮೊದಲ 4 ತಿಂಗಳಲ್ಲಿ ಅವರು ಜಾರ್ಖಂಡ್‌ನ ಎಲ್ಲಾ 24 ಜಿಲ್ಲೆಗಳಿಗೆ ಭೇಟಿ ನೀಡಿ ನಾಗರಿಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು. ರಾಧಾಕೃಷ್ಣನ್ ಅವರು 1998 ಮತ್ತು 1999ರಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ