ಊಟ ಚೆನ್ನಾಗಿತ್ತು ಅನ್ಸುತ್ತೆ; ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ

Updated on: Jun 19, 2025 | 5:52 PM

ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಮೆರಿಕದ ಶ್ವೇತಭವನದಲ್ಲಿ ಊಟಕ್ಕೆ ಆಹ್ವಾನಿಸಿದ್ದಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರತಿಕ್ರಿಯಿಸಿದ್ದು, ಅಮೆರಿಕ "ಒಸಾಮಾ ಬಿನ್ ಲಾಡೆನ್ ಘಟನೆಯನ್ನು ಇಷ್ಟು ಬೇಗ ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್​ನಲ್ಲಿ ಅಲ್​ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್​​ನನ್ನು ಅಮೆರಿಕ ಪಾಕಿಸ್ತಾನದೊಳಗೆ ನುಗ್ಗಿ ಹತ್ಯೆ ಮಾಡಿದ್ದನ್ನು ಶಶಿ ತರೂರ್ ಉಲ್ಲೇಖಿಸಿದ್ದಾರೆ.

ತಿರುವನಂತಪುರಂ, ಜೂನ್ 19: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ (Asim Munir) ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶ್ವೇತಭವನದಲ್ಲಿ ಬುಧವಾರ ಔತಣಕೂಟ ಏರ್ಪಡಿಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಲೇವಡಿ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, “ಊಟ ಬಹಳ ಚೆನ್ನಾಗಿತ್ತು ಎಂದು ನಾನು ಭಾವಿಸುತ್ತೇನೆ. ಊಟ ಮಾಡುತ್ತಾ ಅವರ ಚಿಂತನೆಗೂ ಸ್ವಲ್ಪ ಆಹಾರ ನೀಡಿರಬಹುದು ಎಂದುಕೊಂಡಿದ್ದೇನೆ” ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಶ್ವೇತಭವನದಲ್ಲಿ ಊಟಕ್ಕೆ ಆಹ್ವಾನಿಸಿದ್ದರು. ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭೋಜನಕೂಟದ ಸಮಯದಲ್ಲಿ ಈ ಇಬ್ಬರು ನಾಯಕರು ಭೇಟಿಯಾದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್, ಅಮೆರಿಕ ಇಷ್ಟು ಬೇಗ ಒಸಾಮಾ ಬಿನ್ ಲಾಡೆನ್ ಪ್ರಕರಣವನ್ನು ಮರೆತಿದೆ ಎಂದು ನನಗೆ ಅನಿಸುವುದಿಲ್ಲ ಎಂದಿದ್ದಾರೆ. 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್​ನಲ್ಲಿ ಅಲ್​ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್​​ನನ್ನು ಅಮೆರಿಕ ಪಾಕಿಸ್ತಾನದೊಳಗೆ ನುಗ್ಗಿ ಹತ್ಯೆ ಮಾಡಿದ್ದನ್ನು ಶಶಿ ತರೂರ್ ಉಲ್ಲೇಖಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Jun 19, 2025 05:50 PM