ಸರ್ಕಾರ ಉರುಳಿದರೂ ಚಿಂತೆಯಿಲ್ಲ, ಕುಮಾರಸ್ವಾಮಿ ಪುರಾವೆ ಒದಗಿಸಿದರೆ ಕಿಂಗ್ಪಿನ್ ಅನ್ನು ಬಂಧಿಸುತ್ತೇವೆ: ಆರಗ ಜ್ಞಾನೇಂದ್ರ
ಕುಮಾರಸ್ವಾಮಿಯವರು ಆ ಕಿಂಗ್ಪಿನ್ ಯಾರು ಅಂತ ಬಹಿರಂಗಪಡಿಸಲಿ ಮತ್ತು ಅದಕ್ಕೆ ಪೂರಕವಾದ ದಾಖಲಾತಿ ಒದಗಿಸಲಿ. ನಮ್ಮ ಸರ್ಕಾರ ಉರುಳಿಬಿದ್ದರೂ ಚಿಂತೆಯಿಲ್ಲ, ಕಿಂಗ್ಪಿನ್ ಅನ್ನು ಬಂಧಿಸುತ್ತೇವೆ ಎಂದು ಸಚಿವರು ಹೇಳಿದರು.
Kalaburagi: ಇದನ್ನು ನಿರೀಕ್ಷಿಸಲಾಗಿತ್ತು. ಟೀಕೆ ಮತ್ತು ಪಿಎಸ್ ಐ ನೇಮಕಾತಿ ಹಗರಣದ (PSI Recruitment Scam) ಒತ್ತಡದಿಂದ ಬಳಲಿ ಬಸವಳಿದಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಉತ್ತೇಜಿತರಾಗಿ ಇಲ್ಲವೇ ಕೋಪದಿಂದ ಮಾತಾಡುವುದಿಲ್ಲ. ಆದರೆ ಕಲಬುರಗಿಯಲ್ಲಿ (Kalaburagi) ಶುಕ್ರವಾರದಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ಕೋಪವುಗುಳಿದರು. ಹಾಸನದ ಚನ್ನರಾಯಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡಿದ್ದ ಕುಮಾರಸ್ವಾಮಿಯವರು ಪಿಎಸ್ ಐ ನೇಮಕಾತಿ ಹಗರಣದಲ್ಲಿ ಮೂಲ ಕಿಂಗ್ಪಿನ್ ಹೆಸರೇನಾದರೂ ಬಹಿರಂಗಗೊಂಡರೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಉರುಳುತ್ತದೆ, ಆ ಕಿಂಗ್ಪಿನ್ ಅಷ್ಟು ಪ್ರಭಾವಿಯಾಗಿದ್ದಾರೆ, ಅವರು ಭವಿಷ್ಯದ ನಾಯಕರೆನಿಸಿಕೊಂಡಿದ್ದಾರೆ ಅಂತ ಹೇಳಿ ಸಮಯ ಬಂದಾಗ ಸದರಿ ವಿಷಯದ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡುವುದಾಗಿ ಹೇಳಿದ್ದರು.
ಅವರು ಹೇಳಿರುವುದನ್ನು ಕಲಬುರಗಿಯಲ್ಲಿ ಗೃಹಸಚಿವರ ಗಮನಕ್ಕೆ ತಂದಾಗ ಅವರಿಗೆ ಕೋಪವುಕ್ಕಿ ಬಂತು. ಕುಮಾರಸ್ವಾಮಿಯವರು ಆ ಕಿಂಗ್ಪಿನ್ ಯಾರು ಅಂತ ಬಹಿರಂಗಪಡಿಸಲಿ ಮತ್ತು ಅದಕ್ಕೆ ಪೂರಕವಾದ ದಾಖಲಾತಿ ಒದಗಿಸಲಿ. ನಮ್ಮ ಸರ್ಕಾರ ಉರುಳಿಬಿದ್ದರೂ ಚಿಂತೆಯಿಲ್ಲ, ಕಿಂಗ್ಪಿನ್ ಅನ್ನು ಬಂಧಿಸುತ್ತೇವೆ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಧೋರಣೆ ಪ್ರದರ್ಶಿಸುವುದು ಬೇಡ. ಯಾಕೆಂದರೆ ಪ್ರಕರಣದ ತನಿಖೆ ಅತ್ಯಂತ ಪ್ರಾಮಾಣಿಕತೆಯಿಂದ ನಡೆಯುತ್ತಿದೆ. ಹಾಗಾಗಿ ಅವರು ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿ ಸುಮ್ಮನಾಗುವುದು ಸರಿಯಲ್ಲ. ಅವರಲ್ಲಿ ಅಷ್ಟು ಖಚಿತವಾದ ಮಾಹಿತಿ ಇದ್ದರೆ ಸರ್ಕಾರಕ್ಕೆ, ತನಿಖಾಧಿಕಾರಿಗಳಿಗೆ ನೀಡಲಿ, ನಾವು ಅಧಿಕಾರದಲ್ಲಿ ಮುಂದುವರಿಯುವ ಬಗ್ಗೆ ಯೋಚಿಸುವುದಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣದ ಮೂಲ ಕಿಂಗ್ಪಿನ್ ಹೆಸರು ಬಯಲು ಮಾಡಿದರೆ ಸರ್ಕಾರವೇ ಉರುಳಿ ಹೋಗುತ್ತದೆ: ಕುಮಾರಸ್ವಾಮಿ