ಪ್ರಿಯಾಂಕಾ ಗಾಂಧಿ ವಾದ್ರಾ ಕರ್ನಾಟಕದಿಂದ ಸ್ಪರ್ಧಿಸಬಯಸಿದರೆ ಅವರಿಗೆ ಸ್ವಾಗತ: ಶೋಭಾ ಕರಂದ್ಲಾಜೆ
ನಾವು ನ್ಯಾಯಾಲಯದ ಅದೇಶಗಳನ್ನು ಗೌರವಿಸುವವರು ಹಾಗಾಗಿ ನಮಗೆ ಸೌಹಾರ್ದತೆಯ ಪಾಠ ಬೇಕಿಲ್ಲ. ಯಾರು ಕಾನೂನು ಮತ್ತು ಸಂವಿಧಾನವನ್ನು ಗೌರವಿಸುವುದಿಲ್ಲವೋ ಅವರಿಗೆ ಸೌಹಾರ್ದತೆಯ ಪಾಠ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Udupi: ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳಿಸುವ ಯೋಚನೆಯನ್ನು ಕೆಪಿಸಿಸಿ ಮಾಡುತ್ತಿದೆ ಎಂಬ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಚರ್ಚೆಗಳು ಶುರುವಾಗಿವೆ. ಶನಿವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು, ಪ್ರಿಯಾಂಕಾ ಕರ್ನಾಟಕ ಸ್ಪರ್ಧಿಸ ಬಯಸಿದರೆ ಅವರಿಗೆ ಸ್ವಾಗತ. ಅವರು ಇಲ್ಲಿಗೆ ಬಂದರೆ ಗಾಂಧಿ ಕುಟುಂಬದ ಮೂರು ತಲೆಮಾರಿನವರು ಕರ್ನಾಟಕದಿಂದ ಸಂಸತ್ತನ್ನು ಪ್ರವೇಶಿಸಿದಂತಾಗುತ್ತದೆ. ಹಿಂದೆ ಅವರ ಅಜ್ಜಿ ದಿವಂಗತ ಇಂದಿರಾ ಗಾಂಧಿಯವರು (Indira Gandhi) ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅಮೇಲೆ ಪ್ರಿಯಾಂಕಾ ಅವರ ತಾಯಿ ಸೋನಿಯಾ ಗಾಂಧಿ (Sonia Gandhi) ಸರದಿ. ಅವರು ಬಳ್ಳಾರಿ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದರು. ಈಗ ಪ್ರಿಯಾಂಕಾ ಅದೇ ದಾರಿ ತುಳಿಯಬೇಕು ಅಂದುಕೊಂಡಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ ಎಂದು ಶೋಭಾ ಹೇಳಿದರು.
‘ಅದರೆ ಹಿಂಬಾಗಿಲಿಂದ ಸಂಸತ್ ಪ್ರವೇಶಿಸುವ ಬದಲು ಅವರು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಲೋಕಸಭೆ ಪ್ರವೇಶಿಸಲಿ ಅಂತ ಅವರಿಗೆ ಸಲಹೆ ನೀಡುತ್ತೇನೆ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಸ್ಥಿತಿ ಸರಿಯಿಲ್ಲ, ಪ್ರಿಯಾಂಕಾ ಅದನ್ನು ಪುನರುಜ್ಜೀವಗೊಳಿಸಬಹುದು,’ ಎಂದು ಶೋಭಾ ಹೇಳಿದರು.
ಸಂವಿಧಾನವನ್ನು ಗೌರವಿಸುವ, ಸಮಾಜದಲ್ಲಿ ಶಾಂತಿಯುತವಾಗಿ ಬಾಳಲಿಚ್ಛಿಸುವವರಿಗೆ ಸೌಹಾರ್ದ ಸಮಾವೇಶಗಳನ್ನು ನಡೆಸುವ ಅಗತ್ಯವಿಲ್ಲ. ನಾವು ನ್ಯಾಯಾಲಯದ ಅದೇಶಗಳನ್ನು ಗೌರವಿಸುವವರು ಹಾಗಾಗಿ ನಮಗೆ ಸೌಹಾರ್ದತೆಯ ಪಾಠ ಬೇಕಿಲ್ಲ. ಯಾರು ಕಾನೂನು ಮತ್ತು ಸಂವಿಧಾನವನ್ನು ಗೌರವಿಸುವುದಿಲ್ಲವೋ ಅವರಿಗೆ ಸೌಹಾರ್ದತೆಯ ಪಾಠ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.