Abhishek Sharma: ಸೆಂಚುರಿ ಸಿಡಿಸಿ ಅಭಿಷೇಕ್ ಶರ್ಮಾ ತೋರಿಸಿದ ಚೀಟಿಯಲ್ಲೇನಿತ್ತು?

IPL 2025 SRH vs PBKS: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 141 ರನ್​ ಬಾರಿಸಿದರು.

IPL 2025: ಐಪಿಎಲ್​ನ 27ನೇ  ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ವಿಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಪಂದ್ಯದಲ್ಲಿ 246 ರನ್​ಗಳನ್ನು ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಅಭಿಷೇಕ್ ಶರ್ಮಾ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಅಭಿ ಮೈದಾನದ ಮೂಲೆ ಮೂಲೆಗೆ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಈ ಮೂಲಕ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದರು.

ಈ ಭರ್ಜರಿ ಸೆಂಚುರಿ ಸಂಭ್ರಮದ ನಡುವೆ ಅಭಿಷೇಕ್ ಶರ್ಮಾ ತಮ್ಮ ಜೇಬಿನಿಂದ ಪೇಪರ್ ಚೀಟಿಯೊಂದನ್ನು ತೆಗೆದು ಅಭಿಮಾನಿಗಳತ್ತ ತೋರಿಸಿದರು.  ಆದರೆ ಅಭಿ ತೋರಿಸಿದ ಚೀಟಿಯಲ್ಲಿನ ಬರಹಗಳು ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಹೀಗಾಗಿ ಯುವ ಎಡಗೈ ದಾಂಡಿಗ ತೋರಿಸಿದ ಚೀಟಿಯಲ್ಲೇನಿತ್ತು ಎಂಬ ಪ್ರಶ್ನೆ ಮೂಡುವುದು ಸಹಜ.

Loading...

ಈ ಪ್ರಶ್ನೆಗೆ ಉತ್ತರ… ಇದು ಆರೆಂಜ್ ಆರ್ಮಿಗಾಗಿ. ಹೌದು, ಅಭಿಷೇಕ್ ಶರ್ಮಾ ಬ್ಯಾಟಿಂಗ್​ಗೆ ಬರುವಾಗಲೇ ಸನ್​ರೈಸರ್ಸ್ ಹೈದರಾಬಾದ್ ಅಭಿಮಾನಿಗಳಿಗೆ ಶತಕದ ಉಡುಗೊರೆ ನೀಡಲು ನಿರ್ಧರಿಸಿದ್ದರು. ಅಲ್ಲದೆ ಪೇಪರ್ ಒಂದರಲ್ಲಿ ಇದು ಆರೆಂಜ್ ಆರ್ಮಿಗಾಗಿ ಎಂದು ಬರೆದುಕೊಂಡು ಬಂದಿದ್ದರು.

ಅದರಂತೆ ಪಂಜಾಬ್ ಕಿಂಗ್ಸ್ ವಿರುದ್ಧ ಶತಕ ಸಿಡಿಸುತ್ತಿದ್ದಂತೆ ಅಭಿಷೇಕ್ ಶರ್ಮಾ ಈ ಶತಕ ಸನ್​ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳಾದ ಆರೆಂಜ್ ಆರ್ಮಿಗಾಗಿ ಎಂದು ಬರೆದಿರುವ ಪೇಪರ್ ತೋರಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಆರೆಂಜ್ ಆರ್ಮಿ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 141 ರನ್​ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ 20 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 247 ರನ್ ಬಾರಿಸಿ 8 ವಿಕೆಟ್​ಗಳ ಜಯ ಸಾಧಿಸಿದೆ.

 

 

Published On - 8:30 am, Sun, 13 April 25

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us