AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ವಿರಾಟ್ ಕೊಹ್ಲಿಯನ್ನು ಕೆಣಕಿ ಕೆಟ್ಟ CSK

VIDEO: ವಿರಾಟ್ ಕೊಹ್ಲಿಯನ್ನು ಕೆಣಕಿ ಕೆಟ್ಟ CSK

ಝಾಹಿರ್ ಯೂಸುಫ್
|

Updated on: Apr 06, 2026 | 8:19 AM

Share

Royal Challengers Bengaluru vs Chennai Super Kings: ಐಪಿಎಲ್​ನ 11ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 207 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆರ್​​ಸಿಬಿ 43 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂದಮೇಲೆ ಅಲ್ಲಿ ಕೇವಲ ರನ್‌ಗಳ ಮಳೆ ಮಾತ್ರವಲ್ಲ, ಆಟಗಾರರ ನಡುವಿನ ವಾಕ್ಸಮರವೂ ಅಷ್ಟೇ ಜೋರಾಗಿರುತ್ತದೆ. ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಇಂತಹದ್ದೇ ಒಂದು ಘಟನೆ ಅಭಿಮಾನಿಗಳ ಗಮನ ಸೆಳೆಯಿತು. ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್ ಮತ್ತು ಆರ್‌ಸಿಬಿ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ನಡುವೆ ಮೈದಾನದಲ್ಲಿ ಮಾತಿನ ಚಕಮಕಿ ನಡೆಯಿತು.

ಪಂದ್ಯದ ಮೂರನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಎಸೆದ ವೇಗದ ಎಸೆತವೊಂದನ್ನು ಹೊಡೆಯಲು ವಿರಾಟ್ ಕೊಹ್ಲಿ ವಿಫಲರಾದರು. ಈ ವೇಳೆ ಕೊಹ್ಲಿ ಹತ್ತಿರ ಬಂದ ಖಲೀಲ್ ಏನೋ ಅಂದಿದ್ದಾರೆ. ಇದರಿಂದ ಕೆರಳಿದ ವಿರಾಟ್ ಕೊಹ್ಲಿ, ಕೂಡಲೇ ಖಲೀಲ್ ಅವರ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ನೋಡಿ ತಕ್ಕ ಪ್ರತ್ಯುತ್ತರ ನೀಡಿದರು. ಅಂಪೈರ್ ಮಧ್ಯಪ್ರವೇಶಿಸುವವರೆಗೂ ಇಬ್ಬರ ನಡುವೆ ಕಾವೇರಿದ ಚರ್ಚೆ ನಡೆಯಿತು.

ಬ್ಯಾಟ್ ಮೂಲಕವೇ ಉತ್ತರ ನೀಡಿದ ಕೊಹ್ಲಿ:

ಬೌಲರ್ ಕೆಣಕಿದರೆ ಸುಮ್ಮನೆ ಕೂರುವ ಆಟಗಾರ ಕೊಹ್ಲಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಮುಂದಿನ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತವಾದ ‘ನೋ-ಲುಕ್’ (No-look) 85 ಮೀಟರ್‌ಗಳ ಸಿಕ್ಸರ್ ಸಿಡಿಸುವ ಮೂಲಕ ಮೈದಾನದಲ್ಲಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದು ಖಲೀಲ್ ಅವರ ಸ್ಲೆಡ್ಜಿಂಗ್‌ಗೆ ಕೊಹ್ಲಿ ನೀಡಿದ ಉತ್ತರವಾಗಿತ್ತು.

ಅದುವರೆಗೂ ತದೇಕಚಿತ್ತದಿಂದ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಕೆಣಕಿದ ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಅಲ್ಲಿಂದ ಶುರುವಾದ ಆರ್​ಸಿಬಿ ತಂಡದ ಸಿಡಿಲಬ್ಬರ ನಿಂತದ್ದು 20ನೇ ಓವರ್​ನಲ್ಲಿ. ಅಂದರೆ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್​ಗೆ ಒತ್ತು ನೀಡಿದ ಕೊಹ್ಲಿಯನ್ನು ಕೆಣಕಿ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ತಪ್ಪು ಮಾಡಿತು.

ಪರಿಣಾಮ ವಿರಾಟ್ ಕೊಹ್ಲಿ 18 ಎಸೆತಗಳಲ್ಲಿ 28 ರನ್ ಬಾರಿಸಿ ಆರ್​ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಸಿಡಿಲಬ್ಬರವನ್ನು ಮುಂದುವರೆಸುವ ಮೂಲಕ ಆರ್​ಸಿಬಿ 20 ಓವರ್​ಗಳಲ್ಲಿ 250 ರನ್ ಕಲೆಹಾಕಿತು. ಇದನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.4 ಓವರ್​ಗಳಲ್ಲಿ 207 ರನ್​​ಗಳಿಸಿ, 43 ರನ್‌ಗಳಿಂದ ಸೋಲೊಪ್ಪಿಕೊಂಡಿತು.

 

Follow Us