VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್ನ ತಳ್ಳಿದ ರಿಷಭ್ ಪಂತ್
IPL 2025 DC vs LSG: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಿಚೆಲ್ ಮಾರ್ಷ್ (72) ಹಾಗೂ ನಿಕೋಲಸ್ ಪೂರನ್ (75) ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನಿಂದ ಲಕ್ನೋ ತಂಡ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಅಶುತೋಷ್ ಶರ್ಮಾ 31 ಎಸೆತಗಳಲ್ಲಿ ಅಜೇಯ 66 ರನ್ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಟೀಮ್ ಇಂಡಿಯಾ ಆಟಗಾರರಾದ ರಿಷಭ್ ಪಂತ್ (Rishabh Pant) ಹಾಗೂ ಕುಲ್ದೀಪ್ ಯಾದವ್ ಅತ್ಯುತ್ತಮ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ಈ ಇಬ್ಬರು ಕಳೆದ ಸೀಸನ್ ಐಪಿಎಲ್ನಲ್ಲಿ (IPL 2025) ಡೆಲ್ಲಿ ಕ್ಯಾಪಿಟಲ್ಸ್ ಪರ ಜೊತೆಯಾಗಿ ಆಡಿದ್ದರು. ಇದೀಗ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾದರೆ, ಕುಲ್ದೀಪ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಅದರಂತೆ ಸೋಮವಾರ ನಡೆದ ಐಪಿಎಲ್ನ 4ನೇ ಪಂದ್ಯದಲ್ಲಿ ದೋಸ್ತಿಗಳು ಮುಖಾಮುಖಿಯಾಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಇನಿಂಗ್ಸ್ ವೇಳೆ ರಿಷಭ್ ಪಂತ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಕುಲ್ದೀಪ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅತ್ಯಮೂಲ್ಯ ಯಶಸ್ಸು ತಂದುಕೊಟ್ಟಿದ್ದರು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಪರ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಲ್ದೀಪ್ ಯಾದವ್ ವಿಕೆಟ್ ಪಡೆಯಲು ಪಂತ್ ಕೂಡ ಉತ್ಸುಕರಾಗಿ ಕಾದು ಕುಳಿತಿದ್ದರು.
ಅದರಂತೆ 18ನೇ ಓವರ್ನಲ್ಲಿ ರವಿ ಬಿಷ್ಣೋಯ್ ಎಸೆದ ಫ್ಲಾಟ್ ಎಸೆತವನ್ನು ಆಫ್‌ನತ್ತ ಬಾರಿಸಲು ಕುಲ್ದೀಪ್ ಯಾದವ್ ಯತ್ನಿಸಿದ್ದರು. ಆದರೆ ಚೆಂಡು ಬ್ಯಾಟ್ಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತು. ಈ ವೇಳೆ ಪಂತ್ ರನೌಟ್ ಮಾಡಲು ಕುಲ್ದೀಪ್ ಯಾದವ್ ಕ್ರೀಸ್‌ನಿಂದ ಹೊರಗಿದ್ದಾರೆಯೇ ಎಂದು ಗಮನಿಸಿದ್ದಾರೆ.
ಆದರೆ ಕುಲ್ದೀಪ್ ಯಾದವ್ ಕ್ರೀಸ್ನಲ್ಲಿ ಕಾಲಿಟ್ಟು ಗಟ್ಟಿಯಾಗಿ ನೆಲೆಯೂರಿದ್ದರು. ಕುಲದೀಪ್ ನಿಂತಿರುವ ಭಂಗಿಯನ್ನು ನೋಡಿದ ರಿಷಭ್ ಪಂತ್ ಅವರನ್ನು ಕ್ರೀಸ್‌ನಿಂದ ಹೊರಗೆ ತಳ್ಳಿ ಬೇಲ್ಸ್ ಎಗರಿಸಿದ್ದಾರೆ. ಇಬ್ಬರು ಆಟಗಾರರ ನಡುವಣ ಸ್ನೇಹವನ್ನು ಸಾರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.