ಐಪಿಎಲ್ ಇತಿಹಾಸದಲ್ಲಿ ಈ ರೀತಿಯಾಗಿ ಔಟಾದ ಮೊದಲ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ

Updated on: Apr 26, 2026 | 10:07 PM

Angkrish Raghuvanshi: ಐಪಿಎಲ್ 2026ರ ಕೆಕೆಆರ್ vs ಎಲ್‌ಎಸ್‌ಜಿ ಪಂದ್ಯದಲ್ಲಿ ಆಂಗ್ಕ್ರಿಶ್ ರಘುವಂಶಿ ಬೇಡದ ದಾಖಲೆ ನಿರ್ಮಿಸಿದ್ದಾರೆ. ಫಿಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕಾಗಿ ಔಟಾದ ಮೊದಲ ಐಪಿಎಲ್ ಬ್ಯಾಟರ್ ಎನ್ನುವ ಅನಗತ್ಯ ದಾಖಲೆ ಇವರ ಪಾಲಾಗಿದೆ. ಚೆಂಡು ದೇಹಕ್ಕೆ ಬಡಿದಾಗ ಶಮಿ ಮೇಲ್ಮನವಿ ಸಲ್ಲಿಸಿದರು. ಮೂರನೇ ಅಂಪೈರ್ ಪರಿಶೀಲಿಸಿ ಔಟ್ ಎಂದು ತೀರ್ಪು ನೀಡಿದ್ದು, ಇದು ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಐಪಿಎಲ್ 2026 ಟೂರ್ನಮೆಂಟ್‌ನ 38 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯ ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಗೆ ಸಾಕ್ಷಿಯಾಗಿದೆ. ಎದುರಾಳಿ ತಂಡದ ಫಿಲ್ಡಿಂಗ್​​ಗೆ ಅಡ್ಡಿಪಡಿಸಿದ್ದಕ್ಕಾಗಿ ಕೆಕೆಆರ್ ತಂಡದ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಫಿಲ್ಡಿಂಗ್​​ಗೆ ಅಡ್ಡಿಪಡಿಸಿದ್ದಕ್ಕಾಗಿ ಔಟಾದ ಮೊದಲ ಬ್ಯಾಟರ್ ಎಂಬ ಅನಗತ್ಯ ದಾಖಲೆ ಅಂಗ್‌ಕ್ರಿಶ್ ರಘುವಂಶಿ ಪಾಲಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್​​ಗೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 16 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ತಂಡವು ಒತ್ತಡಕ್ಕೆ ಒಳಗಾಯಿತು. ಹೀಗಾಗಿ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಅಂಗ್‌ಕ್ರಿಶ್ ರಘುವಂಶಿ ಮತ್ತು ಕ್ಯಾಮರೂನ್ ಗ್ರೀನ್‌ ಮೇಲೆ ಉತ್ತು. ಕೆಕೆಆರ್ ಅಭಿಮಾನಿಗಳು ಈ ಜೋಡಿಯಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಇಬ್ಬರೂ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ತಂಡದ ಮೊತ್ತ 27 ರನ್‌ಗಳಿದ್ದಾಗ, ಅಂಗ್‌ಕ್ರಿಶ್ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣದಿಂದಾಗಿ ಔಟಾದರು.

ಪ್ರಿನ್ಸ್ ಯಾದವ್ ಬೌಲ್ ಮಾಡಿದ ಐದನೇ ಓವರ್‌ನ ಕೊನೆಯ ಎಸೆತವನ್ನು ಅಂಗ್‌ಕ್ರಿಶ್ ರಘುವಂಶಿ ಮಿಡ್-ಆನ್ ಕಡೆಗೆ ಹೊಡೆದು ರನ್ ಮಾಡಲು ಮುಂದಾದರು. ಆದರೆ ನಾನ್-ಸ್ಟ್ರೈಕ್‌ನಲ್ಲಿರುವ ಕ್ಯಾಮರೂನ್ ಗ್ರೀನ್ ಅದಕ್ಕೆ ನಿರಾಕರಿಸಿದರು. ಆದ್ದರಿಂದ ಅರ್ಧದಾರಿಯಲ್ಲೇ ಹಿಂತಿರುಗುವುದನ್ನು ಬಿಟ್ಟು ಅಂಗ್‌ಕ್ರಿಶ್​ಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಅಂಗ್‌ಕ್ರಿಶ್ ಸ್ಟ್ರೈಕ್‌ಗೆ ಹಿಂತಿರುಗುವ ಯತ್ನ ಮಾಡಿದರು. ಇತ್ತ ಚೆಂಡನ್ನು ಹಿಡಿದ ಶಮಿ, ಚೆಂಡನ್ನು ವಿಕೆಟ್​ನತ್ತ ಎಸೆದರು. ಈ ಹಂತದಲ್ಲಿ ಚೆಂಡು ಅಂಗ್‌ಕ್ರಿಶ್ ಅವರ ದೇಹಕ್ಕೆ ಬಡಿಯಿತು. ಇದನ್ನು ಗಮನಿಸಿದ ಶಮಿ, ಅಂಗ್‌ಕ್ರಿಶ್ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಾರೆ ಎಂದು ಅಂಪೈರ್ ಬಳಿ ಮನವಿ ಮಾಡಿದರು. ಹೀಗಾಗಿ ಅಂಪೈರ್‌ಗಳು ಕೂಡ ಮೂರನೇ ಅಂಪೈರ್​ಗೆ ಮೇಲ್ಮನವಿ ಸಲ್ಲಿಸಿದರು. ಇದನ್ನು ಮರುಪರಿಶೀಲನೆ ಮಾಡಿದ ಮೂರನೇ ಅಂಪೈರ್, ಅಂಗ್‌ಕ್ರಿಶ್ ಔಟೆಂದು ತೀರ್ಪು ನೀಡಿದರು. ಇದರಿಂದ ಅಂಗ್‌ಕ್ರಿಶ್ ತುಂಬಾ ಅಸಮಾಧಾನಗೊಂಡು ತಮ್ಮ ಆಕ್ರೋಶ ಹೊರಹಾಕಿದರು.

Published on: Apr 26, 2026 10:06 PM
Follow Us