ವಿಷಯವನ್ನು ಇಲ್ಲಿಗೆ ನಿಲ್ಲಿಸಿದರೆ ನನಗೆ ಮತ್ತು ದಿಂಗಾಲೇಶ್ವರ ಶ್ರೀಗಳು-ಇಬ್ಬರಿಗೂ ಒಳ್ಳೆಯದು: ಸಚಿವ ಸಿಸಿ ಪಾಟೀಲ
ಸ್ವಾಮೀಜಿ ಸದರಿ ವಿಷಯವನ್ನು ಇಲ್ಲಿಗೆ ನಿಲ್ಲಿಸಿಬಿಡೋದೇ ಒಳಿತು. ಅದು ಅವರಿಗೂ ಒಳ್ಳೇದು ನನಗೂ ಒಳ್ಳೇದು-ಇಬ್ಬರಿಗೂ ಒಳ್ಳೇದು, ಇದನ್ನು ಅವರು ತಿಳಿದುಕೊಳ್ಳಬೇಕು ಎಂದು ಸಚಿವರು ಹೇಳಿದರು.
Gadag: ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ (Dingaleshwara Swamiji) ಮತ್ತು ಸಚಿವ ಸಿಸಿ ಪಾಟೀಲ (CC Patil) ಅವರ ನಡುವಿನ ಕಾಳಗ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿರುವ ಸಚಿವರು ಕ್ಷಮೆ ಕೇಳದಿದ್ದರೆ ಅವರ ಮನೆ ಮುಂದೆ ಧರಣಿ ಕೂರುವುದಾಗಿ ಸ್ವಾಮಿಗಳು ಎಚ್ಚರಿಸಿದ್ದಾರೆ. ಗದಗಿನ ಟಿವಿ9 ಕನ್ನಡ ಚ್ಯಾನೆಲ್ ವರದಿಗಾರ ಸಂಜೀವ್ ಪಾಂಡ್ರೆ ಶ್ರೀಗಳು ಹೇಳಿರುವುದನ್ನು ಸಚಿವರ ಮುಂದೆ ಪ್ರಸ್ತಾಪಿಸಿದಾಗ, ಅವರ ಪೂರ್ವಾಶ್ರಮದ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ, ಇದರಲ್ಲಿ ಕ್ಷಮೆ ಕೇಳುವುದು ಎಲ್ಲಿಂದ ಬಂತು? ಅವರು ಫಕೀರೇಶ್ವರ ಮಠಕ್ಕೆ (Fakeereshwara Mutt) ಬರುವ ಮೊದಲು ಬೇರೊಂದು ಮಠದ ಶ್ರೀಗಳಾಗಿದ್ದರು. ಆಗ ಅವರ ವಿರುದ್ಧ ದಾಖಲಾಗಿದ್ದ ಕೇಸುಗಳ ಬಗ್ಗೆ ಮಾತಾಡಿದ್ದೇನೆ. ರೌಡಿಸಂ ನಡೆಸಿದ್ದ ಬಗ್ಗೆ ಪ್ರೂವ್ ಮಾಡುವಂಥದ್ದು ಏನೂ ಇಲ್ಲ, ಅದು ನಾಡಿನ ಜನತೆಗೆ ಗೊತ್ತಿದೆ ಅಂತ ಪಾಟೀಲ್ ಹೇಳಿದರು.
ಸ್ವಾಮೀಜಿ ಸದರಿ ವಿಷಯವನ್ನು ಇಲ್ಲಿಗೆ ನಿಲ್ಲಿಸಿಬಿಡೋದೇ ಒಳಿತು. ಅದು ಅವರಿಗೂ ಒಳ್ಳೇದು ನನಗೂ ಒಳ್ಳೇದು-ಇಬ್ಬರಿಗೂ ಒಳ್ಳೇದು, ಇದನ್ನು ಅವರು ತಿಳಿದುಕೊಳ್ಳಬೇಕು. ಅಷ್ಟಕ್ಕೂ ಅವರು ಮುಂದುವರಿಸುವ ಇರಾದೆ ಇಟ್ಟುಕೊಂಡಿದ್ದರೆ ನಾನು ರಾಜಕಾರಣಿ, ನನಗೆ ನೂರು ದಾರಿಗಳಿವೆ ಆದರೆ ಅವರಿಗಿರೋದು ಧರ್ಮದ ಮಾರ್ಗ ಮಾತ್ರ. ಹಾಗಂತ ನಾನೇನೂ ಅಧರ್ಮದ ರಾಜಕಾರಣ ಮಾಡುವುದಿಲ್ಲ, ಎಂದು ಸಚಿವರು ಹೇಳಿದರು.
ಇದನ್ನೆಲ್ಲ ಕಾಂಗ್ರೆಸ್ ಮಾಡಿಸುತ್ತಿದೆ ಅಂತ ನಾನು ಹೇಳೋದಿಲ್ಲ, ಆದರೆ ಒಬ್ಬ ಮಾಜಿ ವಿಧಾನ ಪರಿಷತ್ ಸದಸ್ಯ ಇದರ ಹಿಂದಿದ್ದಾರೆ. ಅವರ ಪಿತೂರಿಗಳಿಗೆಲ್ಲ ನಾನು ಬಲಿಯಾಗುವನಲ್ಲ. ನನ್ನ ಹಣೆಬರಹ ನಿರ್ಧರಿಸುವವರು ನರಗುಂದದ ಜನತೆ ಮತ್ತು ನಮ್ಮ ಕಾರ್ಯಕರ್ತರು. ಮನುಷ್ಯ ಯಾವತ್ತಿಗೂ ದುಡಿಮೆಯ ಮೇಲೆಯೇ ಬದುಕಬೇಕು, ಹಣೆ ಬರಹ, ಕೈಬರಹಗಳನ್ನು ನಂಬಿಕೊಂಡಿರಬಾರದು ಎಂದು ಸಚಿವ ಸಿಸಿ ಪಾಟೀಲ ಹೇಳಿದರು.
ಇದನ್ನೂ ಓದಿ: ನನ್ನ ರೌಡಿಸಂ ಸಾಬೀತು ಮಾಡಿ: ಸಚಿವ ಸಿಸಿ ಪಾಟೀಲ್ ಮನೆ ಎದುರು ದಿಂಗಾಲೇಶ್ವರ ಸ್ವಾಮೀಜಿ ಇಂದು ಧರಣಿ