ENG vs WI: ಬಟ್ಲರ್ ಬ್ಯಾಟ್ ಪವರ್ಗೆ ಸ್ಟೇಡಿಯಂನಿಂದ ಹೊರಬಿದ್ದ ಚೆಂಡು..! ವಿಡಿಯೋ ನೋಡಿ
Jos Buttler: ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಜೋಸ್ ಬಟ್ಲರ್ ಅವರ ಅದ್ಭುತ 83 ರನ್‌ಗಳ ಇನಿಂಗ್ಸ್‌ನಲ್ಲಿ ಒಂದು 115 ಮೀಟರ್ ಉದ್ದದ ಸಿಕ್ಸರ್ ಸಹ ಸೇರಿದೆ. ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ನೀಡಿದ 158 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಬಟ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ಇಂಗ್ಲೆಂಡ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಪ್ರಸ್ತುತ ಐದು ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್ ತಂಡ ವೆಸ್ಟ್‌ಇಂಡೀಸ್ ಪ್ರವಾಸ ಮಾಡಿದೆ. ಈಗಾಗಲೇ ಉಭಯ ತಂಡಗಳ ನಡುವೆ ಎರಡು ಪಂದ್ಯಗಳು ನಡೆದಿದ್ದು, ಆಡಿರುವ ಎರಡೂ ಪಂದ್ಯಗಳನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿದೆ. ಬಾರ್ಬಡೋಸ್ನಲ್ಲಿ ಇಂದು ನಡೆದ ಎರಡನೇ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದುಕೊಳ್ಳುವಲ್ಲಿ ಆಂಗ್ಲ ಪಡೆ ಯಶಸ್ವಿಯಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡ ಕೇವಲ 158 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಬಟ್ಲರ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಸುಲಭ ಜಯ ದಾಖಲಿಸಿತು. ಈ ವೇಳೆ ಬಟ್ಲರ್ ತಮ್ಮ ತೋಳ್ಬಲದ ಸಹಾಯದಿಂದ ಚೆಂಡನ್ನು ಕ್ರೀಡಾಂಗಣದಿಂದ ಹೊರಹಾಕುವಲ್ಲಿಯೂ ಯಶಸ್ವಿಯಾದರು.
ವಾಸ್ತವವಾಗಿ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಟಿ20 ವಿಶ್ವಕಪ್ ನಂತರ ತಂಡದಿಂದ ದೂರ ಉಳಿದಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ತಂಡಕ್ಕೆ ವಾಪಸಾಗಿರುವ ಬಟ್ಲರ್, ಸರಣಿಯ ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿದ್ದರು. ಆದರೆ ಸರಣಿಯ ಎರಡನೇ ಪಂದ್ಯದಲ್ಲಿ ಅವರು ಮೈದಾನಕ್ಕೆ ಬಂದಾಗ ಇಂಗ್ಲೆಂಡ್ ಸ್ಕೋರ್ ಶೂನ್ಯಕ್ಕೆ ಒಂದು ವಿಕೆಟ್ ಆಗಿತ್ತು. ಇಲ್ಲಿಂದ ಜಾಸ್ ಬಟ್ಲರ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
115 ಮೀಟರ್ ಉದ್ದದ ಸಿಕ್ಸರ್
ಇದೇ ವೇಳೆ ಬಟ್ಲರ್, 115 ಮೀಟರ್ ಉದ್ದದ ಸಿಕ್ಸರ್ ಕೂಡ ಬಾರಿಸಿದರು. ಇದು ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್‌ಗಳಲ್ಲಿ ಒಂದಾಗಿದೆ. 9ನೇ ಓವರ್‌ನ ಮೂರನೇ ಎಸೆತದಲ್ಲಿ ವೆಸ್ಟ್‌ಇಂಡೀಸ್‌ನ ಎಡಗೈ ಸ್ಪಿನ್ನರ್ ಗುಡಾಕೇಶ್ ಮೋತಿ ಎಸೆತವನ್ನು ಸಿಕ್ಸರ್ಗಟ್ಟುವಲ್ಲಿ ಯಶಸ್ವಿಯಾದರು. ಬಟ್ಲರ್ ಅವರ ಪವರ್ ಹೇಗಿತ್ತು ಎಂದರೆ, ಚೆಂಡು ಕ್ರೀಡಾಂಗಣದ ಛಾವಣಿಗೆ ಬಡಿದ ಆ ನಂತರ ಹೊರಬಿತ್ತು.
ಆಂಗ್ಲ ತಂಡಕ್ಕೆ 2ನೇ ಗೆಲುವು
ಈ ಪಂದ್ಯದಲ್ಲಿ ಜೋಶ್ ಬಟ್ಲರ್ ಬಿರುಸಿನ ಬ್ಯಾಟಿಂಗ್ ಮಾಡಿ 45 ಎಸೆತಗಳಲ್ಲಿ 83 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳಲ್ಲದೆ, 6 ಸಿಕ್ಸರ್‌ಗಳು ಸಹ ಸೇರಿದ್ದವು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಫಿಲ್ ಸಾಲ್ಟ್ ಔಟಾದರು. ಇದಾದ ಬಳಿಕ ಬಂದ ಬಟ್ಲರ್, ವಿಲ್ ಜಾಕ್ಸ್ ಜೊತೆಗೂಡಿ ಎರಡನೇ ವಿಕೆಟ್‌ಗೆ 72 ಎಸೆತಗಳಲ್ಲಿ 129 ರನ್‌ಗಳ ಜೊತೆಯಾಟ ನಡೆಸಿದರು. ಇದರಲ್ಲಿ ಜಾಕ್ವೆಸ್ 29 ಎಸೆತಗಳಲ್ಲಿ 38 ರನ್ ಗಳಿಸಿದರೆ, ಬಟ್ಲರ್ 43 ಎಸೆತಗಳಲ್ಲಿ 83 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ