ಸಾರ್ವಜನಿಕರ ದೂರುಗಳು ಇನ್ಮುಂದೆ ಸಕಾಲ ಕಾಯ್ದೆ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ ವಿಧಿಸಿ ಆದೇಶ
ಸಾರ್ವಜನಿಕ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ಪರಿಹರಿಸಲು ಕರ್ನಾಟಕ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಪ್ರಜಾಸೇವಾ ಪೋರ್ಟಲ್, 1902 ಸಹಾಯವಾಣಿ, ವಾಟ್ಸಾಪ್, ಸಾಮಾಜಿಕ ಜಾಲತಾಣ ಹಾಗೂ ಜನಸಭೆಗಳಲ್ಲಿ ಸಲ್ಲಿಕೆಯಾಗುವ ದೂರುಗಳು ಸಕಾಲ ಕಾಯ್ದೆಯ ವ್ಯಾಪ್ತಿಗೆ ಬರಲಿವೆ. ದೂರು ಇತ್ಯರ್ಥಕ್ಕೆ 21 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದ್ದು, ವಿಳಂಬಕ್ಕೆ ₹1,500 ದಂಡ ವಿಧಿಸಲಾಗುತ್ತದೆ. ಸುಳ್ಳು ದೂರು ನೀಡಿದರೆ ದೂರುದಾರರಿಗೂ ದಂಡ ಬೀಳಲಿದೆ.
ಬೆಂಗಳೂರು, ನವೆಂಬರ್ 21: ಸಾರ್ವಜನಿಕರ ಕುಂದುಕೊರತೆಗಳಿಗೆ ಕಾಲಮಿತಿಯೊಳಗೆ ಮತ್ತು ಗುಣಾತ್ಮಕವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಜಾಸೇವಾ ಪೋರ್ಟಲ್ ಮೂಲಕ ಸಲ್ಲಿಕೆಯಾಗುವ ಸಾರ್ವಜನಿಕ ದೂರುಗಳನ್ನು ಸಕಾಲ ಕಾಯ್ದೆಯ ವ್ಯಾಪ್ತಿಗೆ ತಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಈ ನೂತನ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರುತ್ತಿದೆ.
ಈ ಹೊಸ ನಿಯಮದಡಿ ಪ್ರಜಾಸೇವಾ ಪೋರ್ಟಲ್ ಮಾತ್ರವಲ್ಲದೆ, ಸರ್ಕಾರಿ ಸಹಾಯವಾಣಿ 1902, ವಾಟ್ಸಾಪ್, ಸಾಮಾಜಿಕ ಜಾಲತಾಣಗಳು ಹಾಗೂ ಜನಸಭೆಗಳಲ್ಲಿ ಸಾರ್ವಜನಿಕರು ಸಲ್ಲಿಸುವ ಎಲ್ಲಾ ದೂರುಗಳು ಸಕಾಲ ವ್ಯಾಪ್ತಿಗೆ ಒಳಪಡಲಿವೆ. ಇದರಿಂದ ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಲಿದೆ. ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದಕ್ಕೆ ಮೂರು ಹಂತಗಳಲ್ಲಿ ಒಟ್ಟು 21 ದಿನಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಸಂಬಂಧಪಟ್ಟ ಅಧಿಕಾರಿಗಳು ದೂರು ಇತ್ಯರ್ಥಪಡಿಸದಿದ್ದರೆ, ಆ ದೂರು ಸ್ವಯಂಚಾಲಿತವಾಗಿ ಮೇಲ್ಮನವಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗುವ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಸೇವೆ ನೀಡುವುದರಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸುವ ಹೊಣೆಗಾರ ಅಧಿಕಾರಿಗಳಿಂದಲೇ ಗರಿಷ್ಠ 1,500 ರೂಪಾಯಿ ಪರಿಹಾರವನ್ನು ವಸೂಲಿ ಮಾಡುವುದಕ್ಕೆ ಸರ್ಕಾರ ಆದೇಶಿಸಿದೆ. ಮತ್ತೊಂದು ಕಡೆ, ಈ ವ್ಯವಸ್ಥೆಯ ದುರುಪಯೋಗವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಸುಳ್ಳು ಅಥವಾ ಕಿರುಕುಳ ನೀಡುವ ಉದ್ದೇಶದಿಂದ ದೂರು ಸಲ್ಲಿಸುವ ದೂರುದಾರರ ವಿರುದ್ಧವೂ 1,500 ರೂಪಾಯಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
