ಪೆಟ್ರೋಲ್, ಡೀಸೆಲ್ ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸರ್ಕಾರದ ವಿರುದ್ಧ ಸಿಟಿ ರವಿ ಪ್ರತಿಭಟನೆ
ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿದ್ದನ್ನು ಬಿಜೆಪಿ ಖಂಡಿಸಿದೆ. ಚಿಕ್ಕಮಗಳೂರಿನಲ್ಲಿ ಎಂಎಲ್ಸಿ ಸಿಟಿ ರವಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಿವಿಯಲ್ಲಿ ದಾಸವಾಳದ ಹೂವು ಇಟ್ಟುಕೊಂಡು, ಕೈಯಲ್ಲಿ ತೆಂಗಿನ ಚಿಪ್ಪು ಹಿಡಿದು ನಗರದ ಹನುಮಂತಪ್ಪ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆ (Karnataka Petrol and Diesel Price Hike) ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಎಂಎಲ್ಸಿ ಸಿ.ಟಿ.ರವಿ (CT Ravi) ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಿವಿಯಲ್ಲಿ ದಾಸವಾಳದ ಹೂವು ಇಟ್ಟುಕೊಂಡು, ಕೈಯಲ್ಲಿ ತೆಂಗಿನ ಚಿಪ್ಪು ಹಿಡಿದು ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರ ಜನರ ಕೈಗೆ ಚಿಪ್ಪು, ದಾಸವಾಳ ಹೂ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಕಿವಿಗೆ ದಾಸವಾಳ ಮುಡಿದು, ಕೈಯಲ್ಲಿ ಚಿಪ್ಪು ಹಿಡಿದು ಬಿಜೆಪಿ ಕಾರ್ಯಕರ್ತರು ದಂಧೆ ಸರ್ಕಾರ, ಲೂಟಿ ಸರ್ಕಾರ, ಜನರಿಗೆ ಚಿಪ್ಪು ಕೊಟ್ಟ ಸರ್ಕಾರ ಎಂದು ಕಿಡಿಕಾರಿದರು.
ಜನ ವಿರೋಧಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡಿಸೇಲ್ ಸೇರಿದಂತೆ ದಿನ ಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರ ಎರಡು ರೂಪಾಯಿ ಬೆಲೆ ಏರಿಕೆ ಮಾಡಿದಾಗ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಪ್ರತಿಭಟನೆ ಮಾಡಿದರು. ಬೈಕ್ನ ಶವಯಾತ್ರೆ ಮಾಡಿದರು. ಇವಾಗ ಜೀವ ಇರುವ ಇವರನ್ನು, ಇವರ ಸರ್ಕಾರವನ್ನು ಹೊತ್ತುಕೊಂಡು ಹೋಗಬೇಕು. ಜನರೇ ಇವರಿಗೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನೇ ನೀತಿ ಮಾಡಿಕೊಂಡಿದೆ. ಕಷ್ಟದಲ್ಲಿರುವ ಜನರಿಗೆ ಸರ್ಕಾರ ದರ ಏರಿಕೆ ಬರೆ ಹಾಕಿದೆ. ಇದು ಜನ ವಿರೋಧಿ ಸರ್ಕಾರ ಎನ್ನಲು ಮತ್ತಾವ್ಯ ಸರ್ಟಿಫಿಕೇಟ್ ಬೇಕಿಲ್ಲ. ಇದು ಜನವಿರೋಧಿ ಸರ್ಕಾರ, ಸತ್ತು ಹೋಗಿರುವ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಲೆ ಏರಿಕೆ ಭಾಗ್ಯ ಕೊಟ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಆರ್ ಅಶೋಕ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ