ಪಾದಯಾತ್ರೆಯ ಮೂಲಕ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್
ಪಾದಯಾತ್ರೆಯು ರವಿವಾರ ಬೆಳಗ್ಗೆ ಖಾನಾಪುರದಿಂದ ಆರಂಭಗೊಂಡು ಗುರ್ಲಗಂಜಿ, ರಾಜಹಂಸಗಢ, ಎಳ್ಳೂರು ಮಾರ್ಗವಾಗಿ ಸಾಗಿ ಸೋಮವಾರ ಬೆಳಗ್ಗ್ಗೆ ಬೆಳಗಾವಿ ತಲುಪಿತು.
ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಮತಕ್ಷೇತ್ರದ ಜನ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಮತ್ತು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಖಾನಾಪುರದಿಂದ ಬೆಳಗಾವಿವರೆಗೆ ಪಾದಯಾತ್ರೆ ಮಾಡಿದರು. ತಾನೊಬ್ಬ ವಿಭಿನ್ನ ಮನೋಭಾವದ ರಾಜಕಾರಣಿ ಅನ್ನುವುದನ್ನು ಈ ಪಾದಯಾತ್ರೆಯ ಮೂಲಕ ಅಂಜಲಿ ಸಾಬೀತು ಮಾಡಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾವರದಿಂದ ಚಳಿಗಾಲದ ವಿಧಾನಸಭೆ ಅಧಿವೇಶನ ಆರಂಭಗೊಂಡಿದೆ. ಅಂಜಲಿಯವರ ಮತ್ತು ಬೆಂಬಲಿಗರ ಪಾದಯಾತ್ರೆ ಬೆಳಗಾವಿ ತಲುಪಿದ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅದರಲ್ಲಿ ಪಾಲ್ಗೊಂಡರು. ಗಣೇಶ್ ಹುಕ್ಕೇರಿ, ಶಾಸಕ ಯತೀಂದ್ರ ಸಿದ್ದರಾಮಯ್ಯ, ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಪಾದಯಾತ್ರೆಯ ಭಾಗವಾಗಿದ್ದರು.
ಸದರಿ ಪಾದಯಾತ್ರೆಯು ರವಿವಾರ ಬೆಳಗ್ಗೆ ಖಾನಾಪುರದಿಂದ ಆರಂಭಗೊಂಡು ಗುರ್ಲಗಂಜಿ, ರಾಜಹಂಸಗಢ, ಎಳ್ಳೂರು ಮಾರ್ಗವಾಗಿ ಸಾಗಿ ಸೋಮವಾರ ಬೆಳಗ್ಗ್ಗೆ ಬೆಳಗಾವಿ ತಲುಪಿತು. ಇಲ್ಲಿರುವ ವಿಡಿಯೋವನ್ನು ಅಲರ್ ವಾಡಾ ಎಂಬ ಗ್ರಾಮದಲ್ಲಿ ಶೂಟ್ ಮಾಡಲಾಗಿದೆ. ಅಂಜಲಿ ಅವರು ಕಾರ್ಯಕರ್ತರು ಮತ್ತು ಸಂಗಡಿಗರೊಂದಿಗೆ ಜಾನಪದ ಹಾಡೊಂದಕ್ಕೆ ಒಬ್ಬ ನುರಿತ ನೃತ್ಯಗಾತಿಯ ಹಾಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಾರೆ.
ಆದರೆ, ಇಲ್ಲಿ ಗಮನಸೆಳೆಯುವುದು ಅವರ ನೃತ್ಯವಲ್ಲ. ಹಾಡು ಮತ್ತು ನೃತ್ಯ ಮುಗಿದ ನಂತರ ಅವರು ಅದನ್ನು ಹಾಡಿದ ಮತ್ತು ಡೊಳ್ಳು, ತಮ್ಮಟೆ ಬಾರಿಸಿದ ಹಿರಿಯ ಕಲಾವಿದರ ಕಾಲು ಮುಟ್ಟಿ ನಮಸ್ಕರಿಸಿದ್ದು.
ಖಾನಾಪುರ ಕ್ಷೇತ್ರದಲ್ಲಿ ಎರಡು ಬಾರಿ ಪ್ರವಾಹ ಪರಿಸ್ಥಿತಿ ತಲೆದೋರಿ ಭತ್ತದ ಬೆಳೆ ನಷ್ಟವಾಗಿದ್ದು ರೈತರಿಗೆ ಪರಿಹಾರ ನೀಡಬೇಕು, ಕೊಚ್ಚಿ ಹೋಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಯಾಗಬೇಕು, ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಬಸ್ಗಳ ವ್ಯವಸ್ಥೆಯಾಗಬೇಕು, ಕ್ಷೇತ್ರದ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿಯನ್ನು ಒದಗಿಸಬೇಕು ಮೊದಲಾದ ಹಲವಾರು ಬೇಡಿಕೆಗಳನ್ನು ಅಂಜಲಿ ಸರ್ಕಾರ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: Viral Video: ಗುಜರಿ ಕಾರಿನ ಭಾಗಗಳಿಂದ ತಯಾರಾಯ್ತು ಹೆಲಿಕಾಪ್ಟರ್; ಟೇಕಾಫ್ ಆದ ಚಾಪರ್ ವಿಡಿಯೋ ವೈರಲ್