VIDEO: ನಾನೇ ಕೆಎಲ್ ರಾಹುಲ್… LSGಗೆ ಕನ್ನಡಿಗನ ತಿರುಗೇಟು

Updated on: Apr 23, 2025 | 8:26 AM

IPL 2025 KL Rahul vs LSG: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 40ನೇ ಪಂದ್ಯದ ಮೂಲಕ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅದು ಆಕರ್ಷಕ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ಎಂಬುದು ವಿಶೇಷ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18ರ ಮೂಲಕ ಕೆಎಲ್ ರಾಹುಲ್ (KL Rahul) ಒಂದೊಂದೇ ಫ್ರಾಂಚೈಸಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಐಪಿಎಲ್​ನ 24ನೇ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಆರ್​ಸಿಬಿ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಹುಲ್ ಇದು ನನ್ನ ಅಡ್ಡ ಎಂಬ ರೀತಿಯಲ್ಲಿ ವೃತ್ತ ಎಳೆದು ಸಂಭ್ರಮಿಸಿದ್ದರು. ಇದೀಗ ತನ್ನ ಮಾಜಿ ತಂಡದ ವಿರುದ್ಧ ಕೂಡ ಕೆಎಲ್ ರಾಹುಲ್ ಕೋಲ್ಡ್ ಸೆಲೆಬ್ರೇಷನ್ ತೋರಿಸಿದ್ದಾರೆ.

ಲಕ್ನೋನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 159 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಜವಾಬ್ದಾರಿಯುತವಾಗಿ ಇನಿಂಗ್ಸ್ ಕಟ್ಟಿದ ರಾಹುಲ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಹೀಗೆ ಅರ್ಧಶತಕ ಪೂರೈಸಿದ ಬಳಿಕ ಕೆಎಲ್ ರಾಹುಲ್ ತನ್ನ ಜೆರ್ಸಿ ಮೇಲಿನ ಹೆಸರು ತೋರಿಸುವ ಮೂಲಕ ಸಂಭ್ರಮಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಲಕ್ನೋ ಸೂಪರ್ ಜೈಂಟ್ಸ್​ಗೆ ನಾನೇ ಕೆಎಲ್ ರಾಹುಲ್ ಎಂಬ ಸಂದೇಶ ಸಾರಿದ್ದಾರೆ. ಇದೀಗ ಕನ್ನಡಿಗನ ಈ ಕೋಲ್ಡ್ ಸೆಲೆಬ್ರೇಷನ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ 57 ರನ್ ಬಾರಿಸಿ ಅಜೇಯರಾಗಿ ಉಳಿದ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 17.5 ಓವರ್​ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.

ಅಂದಹಾಗೆ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ಪರ ಮೂರು ವರ್ಷ ಆಡಿದ್ದರು. ಆದರೆ ಕಳೆದ ಸೀಸನ್​ನಲ್ಲಿ ಎಲ್​ಎಸ್​ಜಿ ತಂಡ ಸೋತಾಗ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಮೈದಾನದಲ್ಲೇ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಮನ ನೊಂದಿದ್ದ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿದ್ದರು.

ಅದರಂತೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುತ್ತಿರುವ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧವೇ ಅರ್ಧಶತಕ ಬಾರಿಸಿ ನಾನೇ ಕೆಎಲ್ ರಾಹುಲ್ ಎಂದು ತಿರುಗೇಟು ನೀಡಿದ್ದಾರೆ.

 

 

Follow Us
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More