‘ಬಡವರ ಮಕ್ಕಳಿಗೆ ಕೆಲಸ ಕೊಡಿ’: ಕೇಂದ್ರ ಸರ್ಕಾರಕ್ಕೆ ದುನಿಯಾ ವಿಜಯ್ ಒತ್ತಾಯ
ಕರ್ನಾಟಕದ 14 ಕ್ಷೇತ್ರಗಳಲ್ಲಿ ಇಂದು (ಏಪ್ರಿಲ್ 26) ಲೋಕಸಭಾ ಚುನಾವಣೆ ನಡೆದಿದೆ. ಬೆಂಗಳೂರಿನಲ್ಲಿ ನಟ ದುನಿಯಾ ವಿಜಯ್ ಅವರು ಮತ ಹಾಕಿದ್ದಾರೆ. ಮುಂಬರುವ ಕೇಂದ್ರ ಸರ್ಕಾರದ ಮೇಲೆ ಅವರಿಗೆ ಒಂದಷ್ಟು ನಿರೀಕ್ಷೆಗಳು ಇವೆ. ಬಡವರ ಪರವಾಗಿ ಕೆಲಸಗಳು ಆಗಬೇಕು ಎಂದು ವಿಜಯ್ ಹೇಳಿದ್ದಾರೆ. ಮುಖ್ಯವಾಗಿ ಎಲ್ಲರಿಗೂ ಉದ್ಯೋಗ ಸಿಗಬೇಕು ಎಂದು ಅವರು ಹೇಳಿದ್ದಾರೆ.
ನಟ ದುನಿಯಾ ವಿಜಯ್ (Duniya Vijay) ಅವರು ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ಅವರು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಯುವಕರು ಮತದಾನ ಮಾಡಲೇಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೇ, ಕೇಂದ್ರ ಸರ್ಕಾರದಿಂದ (Central Government) ತಮಗೆ ಇರುವ ನಿರೀಕ್ಷೆ ಏನು ಎಂಬುದನ್ನು ದುನಿಯಾ ವಿಜಯ್ ಹೇಳಿದ್ದಾರೆ. ‘ನಿಮ್ಮ ಮತ ನಿಮ್ಮ ಹಕ್ಕು. ಸುಮ್ಮನೆ ಮನೆಯಲ್ಲಿ ಇರಬೇಡಿ. ಎದ್ದು ಬಂದು ಓಟ್ ಮಾಡಿ. ಇಲ್ಲದಿದ್ದರೆ ಮುಂದೆ ಒಂದು ದಿನ ತುಂಬ ಕಷ್ಟ ಆಗುತ್ತೆ. ಇವತ್ತು ನಿರ್ಲಕ್ಷ್ಯ ತೋರಿಸಿದರೆ ಅದರ ಪರಿಣಾಮ ಕೆಟ್ಟದಾಗಿ ಇರುತ್ತದೆ. ಯುವಕರು ತಾತ್ಸಾರ ಮಾಡಬೇಡಿ. ನಿಮ್ಮ ಹಕ್ಕನ್ನು ನೀವು ಬಿಡಬೇಡಿ. ಇಲ್ಲದಿದ್ದರೆ ಮುಂದೆ ತುಂಬ ಅನುಭವಿಸಬೇಕಾಗುತ್ತದೆ. ಓದಿರುವ ಎಲ್ಲರಿಗೂ ಕೇಂದ್ರ ಸರ್ಕಾರದವರು ಕೆಲಸ ಕೊಡಬೇಕು. ಬಡವರ ಮಕ್ಕಳಿಗೆ ಕೆಲಸ ಕೊಡಿ. ಪ್ರಾಮಾಣಿಕವಾಗಿ ಪಿಎಸ್ಐ ಪರೀಕ್ಷೆ ಬರೆದವರಿಗೆ ಕೆಲಸ ಸಿಗಲಿಲ್ಲ. ಯಾರೇ ಅಧಿಕಾರಕ್ಕೆ ಬಂದರೂ ವಿದ್ಯಾವಂತರಿಗೆ ಉದ್ಯೋಗ ನೀಡಿ. ಆಶಾ ಕಾರ್ಯಕರ್ತೆಯರು ಮುಂತಾದ ಮಹಿಳೆಯರಿಗೆ ಉದ್ಯೋಗ ಖಾಯಂ ಮಾಡಿ. ಸರ್ಕಾರ ಯಾವುದೇ ಬಂದರೂ ಬಡವರಿಗೆ ಸಹಾಯ ಮಾಡಿ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅನೇಕ ಸೆಲೆಬ್ರಿಟ್ರಿಗಳು ಮತ ಚಲಾಯಿಸಿದ್ದಾರೆ. ಯಶ್, ರಾಧಿಕಾ ಪಂಡಿತ್, ಉಪೇಂದ್ರ, ದರ್ಶನ್, ರಮೇಶ್ ಅರವಿಂದ್ ಮುಂತಾದ ಕಲಾವಿದರು ಬೆಂಗಳೂರಿನಲ್ಲಿ ಓಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.