ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದ್ದ ಚಾಪರ್ ಕೊಯಮತ್ತೂರ್ ಬಳಿ ಪತನ, 11 ಸಾವು
ಮೂಲಗಳ ಪ್ರಕಾರ ಸಿಡಿಎಸ್ ರಾವತ್ ಅವರು ಕೊಯಮತ್ತೂರ್ ಹತ್ತಿರ ಸುಲೂರ್ ನಲ್ಲಿರುವ ಭಾರತೀಯ ವಾಯುನೆಲೆಯಿಂದ ವೆಲಿಂಗ್ಟನಲ್ಲಿರುವ ರಕ್ಷಣಾ ಸಿಬ್ಬಂದಿ ಕಾಲೇಜಿಗೆ ಹೊರಟಿದ್ದಾಗ ಈ ಭೀಕಕ ದುರ್ಘಟನೆ ಸಂಭವಿಸಿದೆ.
ಭಾರತೀಯ ರಕ್ಷಣಾ ಪಡೆಗಳ (ಸಿಡಿಎಸ್) ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ರಕ್ಷಣಾ ಸಹಾಯಕ, ಭಾರತೀಯ ವಾಯುಸೇನೆಯ ಒಬ್ಬ ಪೈಲಟ್ ಮತ್ತು ಭದ್ರತಾ ಕಮಾಂಡೋಗಳಿದ್ದ ಎಮ್ಐ-ಸಿರೀಸ್ ಹೆಲಿಕಾಪ್ಟರ್ ತಮಿಳುನಾಡಿನ ಸುಲೂರ್ ಮತ್ತು ಕೊಯಮತ್ತೂರ್ ನಡುವಿನ ನೀಲಗಿರಿ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಚಾಪರ್ನಲ್ಲಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಸತ್ತವರು ಯಾರೆಂದು ಇನ್ನೂ ಗೊತ್ತಾಗಬೇಕಿದೆ. ಮೂಲಗಳ ಪ್ರಕಾರ ಸಿಡಿಎಸ್ ರಾವತ್ ಅವರು ಕೊಯಮತ್ತೂರ್ ಹತ್ತಿರ ಸುಲೂರ್ ನಲ್ಲಿರುವ ಭಾರತೀಯ ವಾಯುನೆಲೆಯಿಂದ ವೆಲಿಂಗ್ಟನಲ್ಲಿರುವ ರಕ್ಷಣಾ ಸಿಬ್ಬಂದಿ ಕಾಲೇಜಿಗೆ ಹೊರಟಿದ್ದಾಗ ಈ ಭೀಕಕ ದುರ್ಘಟನೆ ಸಂಭವಿಸಿದೆ. ಇದಕ್ಕೆ ಮೊದಲು ಅವರು ದೆಹಲಿಯಿಂದ ಇತರ 8 ಜನರೊಂದಿಗೆ ವಿಮಾನವೊಂದರಲ್ಲಿ ಹೊರಟು ಸುಲೂರ್ ತಲುಪಿದ್ದರು.
ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ರಕ್ಷಣಾ ಕಾರ್ಯ ಜಾರಿಯಲ್ಲಿದೆ. ಬೆಂಕಿಯ ಜ್ವಾಲೆ ಮತ್ತು ಹೊಗೆ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನೆರವಾಗುತ್ತಿದ್ದಾರೆ. ತಮಿಳುನಾಡು ಮಿಲಿಟರಿ ಪಡೆ ಅಧಿಕಾರಿಗಳ ತಂಡವೂ ಸೇರದಂತೆ ಇನ್ನೂ ಬೇರೆ ಬೇರೆ ರಕ್ಷಣಾ ಪಡೆಗಳು ದುರ್ಘಟನೆ ನಡೆದ ಸ್ಥಳವನ್ನು ತಲುಪಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.
ಏತನ್ಮಧ್ಯೆ, ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತು ಶೇಕಡಾ 80 ರಷ್ಟು ಸುಟ್ಟಗಾಯಗಳಿಂದ ನರಳುತ್ತಿರುವವರನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಹೆಲಿಕಾಪ್ಟರ್ನಲ್ಲಿದ್ದವರು:
ಜನರಲ್ ಬಿಪಿನ್ ರಾವತ್, ಶ್ರೀಮತಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ ಎಸ್ ಲಿಡ್ಡರ್, ಎಸ್ ಎಮ್, ವಿಎಸ್ಎಮ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಎನ್ ಕೆ ಗುರುಸೇವಕ ಸಿಂಗ್, ಎನ್ ಕೆ ಜಿತೇಂದ್ರ ಕುಮಾರ್, ವಿವೇಕ್ ಕುಮಾರ್, ಬಿ ಸಾಯಿತೇಜ, ಹವ ಸತ್ಪಾಲ್ ಮತ್ತು ಐವರು ಕ್ರ್ಯೂ ಸಿಬ್ಬಂದಿ.
ನಮಗೆ ಮಧ್ಯಾಹ್ನ 3:30 ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ದುರ್ಘಟನೆಯಲ್ಲಿ ಇದುವರೆಗೆ 11 ಜನ ಸಾವನ್ನಪ್ಪಿದ್ದಾರೆ.