ರೈತರಿಂದ ಬೆವರಿಳಿಸಿಕೊಂಡ ಸಚಿವ ವೆಂಕಟೇಶ್ ಮಾಧ್ಯಮದವರ ಮೇಲೆ ರೇಗುವ ಪ್ರಯತ್ನ ಮಾಡಿದರು!
ಯಾರದ್ದೋ ಪಾಪ ಸನ್ಯಾಸಿಗೆ, ಸನ್ಯಾಸಿ ಪಾಪ ಊರಿಗೆ ಅಂತ ಹೇಳ್ತಾರಲ್ಲ......ಹಾಗೆಯೇ ಸಚಿವ ವೆಂಕಟೇಶ್ ರೈತರಿಂದ ತರಾಟೆಗೊಳಗಾದ ಕೋಪವನ್ನು ಮಾಧ್ಯಮದವರ ಮೇಲೆ ತೀರಿಸಿಕೊಳ್ಳಲು ಪ್ರಯತ್ನಿಸಿದರು. ಮನವಿ ಪತ್ರಗಳನ್ನು ಸಿಎಂ ಬಿಸಾಕಿಲ್ಲ, ಅವರು ಜವಾಬ್ದಾರಿಯುಳ್ಳ ವ್ಯಕ್ತಿ, ಹೇಗೆ ಬಿಸಾಡುತ್ತಾರೆ? ಅಂತ ಕೂಗಾಡುತ್ತ ಅಲ್ಲಿಂದ ದುರ್ದಾನ ತೆಗೆದುಕೊಂಡವರಂತೆ ಹೊರಟುಬಿಟ್ಟರು.
ಚಾಮರಾಜನಗರ: ಜಿಲ್ಲೆಯ ರೈತರು ಮುಖ್ಯಮಂತ್ರಿಯವರಿಗೆ ನೀಡಿದ ಮನವಿ ಪತ್ರಗಳು ಮರುದಿನ ಕಸದಬುಟ್ಟಿಯಲ್ಲಿ ಸಿಕ್ಕಿದ್ದು ರಾಜ್ಯದ ರೈತ ಸಮುದಾಯವನ್ನು ಕೆರಳಿಸಿದೆ. ಇಂದು ಸಿಎಂ ಪರ ಸಮಜಾಯಿಷಿ ನೀಡಲು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ನಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಂಡು ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ, ಸಿಎಂ ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳಿಸಿ ನಮಗೆ ನೆರವಾಗುವ ಕೆಲಸ ಮಾಡಬೇಕು, ಅವರು ಶಿಷ್ಟಾಚಾರವನ್ನೂ ಮರೆತು ನಮ್ಮ ಮನವಿಗಳನ್ನು ಕಸದ ಬುಟ್ಟಿಗೆ ಎಸೆದರೆ ಹೇಗೆ? ಅಂತ ರೈತರು ಪ್ರಶ್ನಿಸಿದಾಗ, ಉತ್ತರಿಸಲು ತಡಬಡಾಯಿಸಿದ ವೆಂಕಟೇಶ್ ಅವರು ಉದ್ದೇಶಪೂರ್ವಕಾವಾಗಿ ಹಾಗೆ ಮಾಡಿರಲ್ಲ, ಮರೆತಿರಬಹುದು, ಅಂತ ಹೇಳಿದಾಗ ವಿಡಿಯೋದಲ್ಲಿ ಎಲ್ಲ ಗೊತ್ತಾಗುತ್ತಿದೆಯಲ್ಲ ಸರ್ ಎಂದು ರೈತರು ಹೇಳುತ್ತಾರೆ. ಮುಖ್ಯಮಂತ್ರಿ ರೈತರ ಕ್ಷಮೆ ಕೇಳುತ್ತಾರಾ ಅಂತ ಕೇಳಿದ್ದಕ್ಕೆ, ಬೇರೆ ಪ್ರತಿಗಳನ್ನು ಕೊಡಿ, ಅವರಿಗೆ ತಲುಪಿಸಿ ಮಾತಾಡುತ್ತೇನೆ ಎಂದು ಸಚಿವ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕ್ಷಮೆ ಕೇಳುವ ಬಗ್ಗೆ ಸಚಿವ ಏನನ್ನೂ ಹೇಳಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಾಮರಾಜನಗರ: ರೈತರು, ಸಾರ್ವಜನಿಕರಿಂದ ಸಿಎಂ ಸಿದ್ಧರಾಮಯ್ಯ ಸ್ವೀಕರಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ