ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ ಸ್ಪಷ್ಟನೆ
ಸಚಿವ ಕೆ.ಎಂ.ಶಿವಲಿಂಗೇಗೌಡರು ‘‘ಗೌರವಯುತವಾಗಿ ನೋಡಿಕೊಳ್ಳಿ’’ ಎಂಬ ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನು ಲಂಚಕ್ಕೆ ಸಂಬಂಧಿಸಿದ ಹೇಳಿಕೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಅಧಿಕಾರಿಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಕೆಲಸವಾದ ನಂತರ ಕೃತಜ್ಞತೆ ಸಲ್ಲಿಸಿ ಎಂಬುದಷ್ಟೇ ಮಾತಿನ ಉದ್ದೇಶವಾಗಿತ್ತು. ಲಂಚ ಸ್ವೀಕರಿಸಿದ ಆರೋಪಗಳ ಕುರಿತು ಜಿಲ್ಲಾಧಿಕಾರಿಗೆ ತನಿಖೆ ನಡೆಸಲು ಸಹ ಆದೇಶಿಸಿದ್ದೇನೆ ಎಂದಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 23: ಸಚಿವ ಕೆಎಂ ಶಿವಲಿಂಗೇಗೌಡರು ಲಂಚ ನೀಡುವಂತೆ ಹೇಳಿದ್ದಾರೆ ಎಂಬ ಆರೋಪಗಳ ಕುರಿತ ಚರ್ಚೆ ಜೋರಾದ ಬೆನ್ನಲ್ಲೇ ಆ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜಾಸೇವಾ ಆಂದೋಲನದ ವೇಳೆ ಸರ್ವೇಯರ್‌ಗಳು ಲಂಚ ಕೇಳುತ್ತಿದ್ದಾರೆ ಎಂದು ಹಲವು ರೈತರು ಆರೋಪಿಸಿದ್ದರು. ಆ ಸಂದರ್ಭದಲ್ಲಿ, ‘ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದುಕೊಂಡು, ಕೆಲಸವಾದ ಮೇಲೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧರ್ಮ’ ಎಂದು ಹೇಳಿದ್ದೆ ಅಷ್ಟೆ. ಈ ಮಾತನ್ನು ಲಂಚ ನೀಡಿ ಎಂಬ ಅರ್ಥದಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.
‘ನಾನು ಯಾರ ಬಳಿಯೂ ಹಣ ಕೊಡಲು ಹೇಳಿಲ್ಲ. ಯಾವುದೇ ಅಧಿಕಾರಿಗೆ 10 ರೂಪಾಯಿ ಕೂಡ ಕೊಡಬೇಕಾಗಿಲ್ಲ. ನನ್ನ ಉದ್ದೇಶ ಅಧಿಕಾರಿಗಳ ಜೊತೆ ಸೌಹಾರ್ದಯುತವಾಗಿ ನಡೆದುಕೊಂಡು, ಅವರ ಕೆಲಸಕ್ಕೆ ಧನ್ಯವಾದ ಸಲ್ಲಿಸುವುದು ಅಷ್ಟೇ. ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪ್ರಸ್ತಾಪ ಇರಲಿಲ್ಲ’ ಎಂದು ಶಿವಲಿಂಗೇಗೌಡರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಲಂಚ ಪಡೆದ ಆರೋಪಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತನಿಖೆ ನಡೆಸಿ ಹಣ ವಾಪಸ್ ಕೊಡಿಸುವಂತೆ ಆದೇಶ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
