ಮೈಸೂರಲ್ಲಿ ಚಲಿಸುತ್ತಿದ್ದ ಕಾರು ಹೊತ್ತಿ ಉರಿದು ಕರಕಲಾಯಿತು, ಡ್ರೈವ್ ಮಾಡುತ್ತಿದ್ದ ವೈದ್ಯರು ಅಪಾಯದಿಂದ ಪಾರು

ಮೈಸೂರಲ್ಲಿ ಚಲಿಸುತ್ತಿದ್ದ ಕಾರು ಹೊತ್ತಿ ಉರಿದು ಕರಕಲಾಯಿತು, ಡ್ರೈವ್ ಮಾಡುತ್ತಿದ್ದ ವೈದ್ಯರು ಅಪಾಯದಿಂದ ಪಾರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 11, 2022 | 7:32 PM

ಫೈರ್ ಬ್ರಿಗೇಡ್ ಸಿಬ್ಬಂದಿ ಅಲ್ಲಿಗೆ ಬರುವ ಹೊತ್ತಿಗೆ ಕಾರಿನ ಬಹುಭಾಗ ಬೆಂಕಿಗಾಹುತಿಯಾಗಿದೆ. ಅವರು ಬೆಂಕಿಯನ್ನು ನಂದಿಸಿದ ನಂತರ ಉಳಿದಿದ್ದು ಇದ್ದಲಿಯಂತೆ ಕಾಣುವ ವೈದ್ಯರ ಕಾರು.

ಚಲಿಸುವ ಕಾರುಗಳಿಗೆ ಬೆಂಕಿ ಹೊತ್ತಿಕೊಳ್ಳುವುದು ಹೊಸ ಸಂಗತಿಯೇನೂ ಅಲ್ಲ. ಅಂಥ ಘಟನೆಗಳ ಬಗ್ಗೆ ನಾವು ಆಗಾಗ ಕೇಳುತ್ತಿರುತ್ತೇವೆ. ಮಂಗಳವಾರದಂದು ಮೈಸೂರಿನಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ ಭೂಷಣ್ ಅವರಿಗೆ ಸೇರಿದ ಕಾರು ಚಲಿಸುವಾಗಲೇ ಅದ್ಯಾವ ಪರಿ ಸುಟ್ಟು ಕರಕಲಾಗಿದೆ ಅಂತ ನೀವು ಈ ವಿಡಿಯೋನಲ್ಲಿ ನೋಡಬಹುದು. ಅದನ್ನು ಗುರುತು ಹಿಡಿಯುವುದು ಸಹ ಕಷ್ಟ, ಅಷ್ಟರ ಮಟ್ಟಿಗೆ ಸುಟ್ಟುಹೋಗಿದೆ. ಅಂದಹಾಗೆ, ಮೈಸೂರಿನ ಕುವೆಂಪು ನಗರದ ನಿವಾಸಿಯಾಗಿರುವ ಡಾ ಭೂಷಣ್ ಅವರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಕಾರಿನ ಬಾನೆಟ್​ನಿಂದ ಹೊಗೆ ಹೊರಬರುತ್ತಿರೋದು ಕಂಡ ಕೂಡಲೇ ಅವರು ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಕೆಳಗಿಳಿದ್ದಾರೆ.

ಅವರು ಇಳಿದ ಮೇಲೆ ಕಾರು ಹೊತ್ತಿ ಉರಿಯಲಾರಂಭಿಸಿದೆ. ಮೈಸೂರಿನ ಅಗ್ನಿ ಶಾಮಕ ದಳದವರಿಗೆ ಅವರೇ ಫೋನ್ ಮಾಡಿದರೋ ಅಥವಾ ದಾರಿಹೋಕರ ಪೈಕಿ ಯಾರಾದರೂ ಮಾಡಿದರೋ ಅಂತ ಸ್ಪಷ್ಟವಾಗಿಲ್ಲ. ಆದರೆ ವಿಷಯವೇನೆಂದರೆ, ಫೈರ್ ಬ್ರಿಗೇಡ್ ಸಿಬ್ಬಂದಿ ಅಲ್ಲಿಗೆ ಬರುವ ಹೊತ್ತಿಗೆ ಕಾರಿನ ಬಹುಭಾಗ ಬೆಂಕಿಗಾಹುತಿಯಾಗಿದೆ. ಅವರು ಬೆಂಕಿಯನ್ನು ನಂದಿಸಿದ ನಂತರ ಉಳಿದಿದ್ದು ಇದ್ದಲಿಯಂತೆ ಕಾಣುವ ವೈದ್ಯರ ಕಾರು.

ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಅಗ್ನಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕಾರು ತಯಾರಿಸುವ ಕಂಪನಿಗಳು ಈ ಅಪಾಯಕಾರಿ ಆಯಾಮದ ಕಡೆ ಗಮನ ನೀಡಬೇಕಿದೆ. ಚಲಿಸುವ ಕಾರುಗಳಲ್ಲಿ ಬೆಂಕಿ ಹತ್ತಿಕೊಳ್ಳಬಹುದಾದ ಎಲ್ಲ ಅಂಶಗಳನ್ನು ಗಮನಿಸಿ ಅಪಾಯವನ್ನು ಇಲ್ಲವಾಗಿಸಬೇಕಾದ ಅವಶ್ಯಕತೆಯಂತೂ ಇದ್ದೇ ಇದೆ.

ಇದನ್ನೂ ಓದಿ:    Pushpa The Rise: ರಶ್ಮಿಕಾರಂತೆ ಹೆಜ್ಜೆಹಾಕಿ ಎಲ್ಲರನ್ನೂ ದಂಗಾಗಿಸಿದ ಸ್ಪೈಡರ್​ಮ್ಯಾನ್! ಇಲ್ಲಿದೆ ವಿಡಿಯೋ ಸಾಕ್ಷಿ 

Published on: Jan 11, 2022 07:31 PM