ತಿರಂಗ ಯಾತ್ರೆಗೆ ತಡೆ; ನೇಹಾ ಬೋರಾ, ದಿಪ್ಕೆ ಸೇರಿ 150 ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ಕನ್ನಾಟ್ ಪ್ಲೇಸ್ನಲ್ಲಿ ಸಿಜೆಪಿ ಆಯೋಜಿಸಿದ್ದ 'ಲೆಹ್ರಾ ದೋ ತ್ರಿರಂಗ' ಪ್ರತಿಭಟನಾ ರ್ಯಾಲಿಗೂ ಮುನ್ನವೇ 'ಕಾಕ್ರೋಚ್ ಜನತಾ ಪಾರ್ಟಿ'ಯ ಮತ್ತೊಬ್ಬ ಪ್ರಮುಖ ನಾಯಕಿ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಕನ್ನಾಟ್ ಪ್ಲೇಸ್ ಸುತ್ತಮುತ್ತ ನಿಷೇಧಾಜ್ಞೆ (ಸೆಕ್ಷನ್ 163) ಜಾರಿಯಲ್ಲಿದ್ದು, ಪ್ರತಿಭಟನೆಗೆ ಯಾವುದೇ ಅನುಮತಿ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.
ನವದೆಹಲಿ, ಅಕ್ಟೋಬರ್ 16: ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಕರೆನೀಡಿದ್ದ ‘ಲೆಹ್ರಾ ದೋ ತಿರಂಗ’ ಪ್ರತಿಭಟನಾ ರ್ಯಾಲಿಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಸುಮಾರು 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನೇಹಾ ಬೋರಾ, ಅಭಿಜಿತ್ ದಿಪ್ಕೆ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಸಿಜೆಪಿ ಹಮ್ಮಿಕೊಂಡಿದ್ದ ಈ ರ್ಯಾಳಿಗೆ ಯಾವುದೇ ಅನುಮತಿ ನೀಡಲಾಗಿರಲಿಲ್ಲ. ಕನ್ನಾಟ್ ಪ್ಲೇಸ್ ಸುತ್ತಮುತ್ತ ಬಿಗಿ ಭದ್ರತೆ ಹಾಗೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ರ್ಯಾಲಿ ನಡೆಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಧ್ಯ ದೆಹಲಿಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಸಂಪೂರ್ಣ ಹತೋಟಿ ಸಾಧಿಸಿದ್ದು, ರಾಷ್ಟ್ರಧ್ವಜದೊಂದಿಗೆ ಪ್ರತಿಭಟನೆಗೆ ಆಗಮಿಸಿದ್ದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಮತ್ತು ನೇಹಾ ಬೋರಾ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

