ಉದ್ಘಾಟನೆಯಾಗಿ ಎರಡೇ ವಾರಕ್ಕೆ ಮಳೆನೀರು ತುಂಬಿ ಕೆರೆಯಂತಾದ ಮುಂಬೈ ಮೆಟ್ರೋ ನಿಲ್ದಾಣ
ಹೊಸದಾಗಿ ಉದ್ಘಾಟನೆಗೊಂಡ ಮುಂಬೈ ಮೆಟ್ರೋ ರೈಲು ಮಾರ್ಗ 3ಕ್ಕೆ ಮಳೆ ನೀರು ನುಗ್ಗಿದ ನಂತರ ಅದು ಪೂರ್ತಿ ಜಲಾವೃತವಾಗಿದೆ. ಮುಂಬೈನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ವರ್ಲಿ ಮೆಟ್ರೋ ನಿಲ್ದಾಣ ಕೆರೆಯಂತಾಗಿದೆ. ಮಳೆ ನೀರಿನಿಂದ ಈ ಮೆಟ್ರೋ ನಿಲ್ದಾಣವು ಕೆಸರು ನೀರಿನಿಂದ ತುಂಬಿ ತುಳುಕುತ್ತಿದೆ. ಮುಂಬೈನ ಹಲವಾರು ಭಾಗಗಳಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಸಂಚಾರ ಮತ್ತು ನಾಗರಿಕರಿಗೆ ತೊಂದರೆಯಾಗಿದೆ. ವರ್ಲಿ ಮೆಟ್ರೋ ನಿಲ್ದಾಣದ ದೃಶ್ಯಗಳು ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಸರು ನೀರು ತುಂಬಿ ಮೆಟ್ರೋ ಗೇಟ್‌ಗಳವರೆಗೆ ತಲುಪಿರುವುದನ್ನು ತೋರಿಸುತ್ತವೆ.
ಮುಂಬೈ, ಮೇ 26: ಈ ಬಾರಿ ಭಾರತದಲ್ಲಿ ಬೇಗನೆ ಮಳೆಗಾಲ ಶುರುವಾಗಿದೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈನ ವರ್ಲಿ ಮೆಟ್ರೋ ನಿಲ್ದಾಣವು (Worli Metro Station) ಜಲಾವೃತಗೊಂಡಿದೆ. ನಿನ್ನೆ ರಾತ್ರಿಯಿಂದ ಪ್ರಾರಂಭವಾಗಿ ಬೆಳಗಿನವರೆಗೂ ಮುಂದುವರಿದ ಭಾರೀ ಮಳೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿದೆ. ಮುಂಬೈನಲ್ಲಿ (Mumbai Rains) ನಿರಂತರ ಮಳೆಯಾದ ನಂತರ ಮೇ 10ರಂದು ಉದ್ಘಾಟನೆಯಾಗಿದ್ದ ವರ್ಲಿ ಮೆಟ್ರೋ ನಿಲ್ದಾಣದಲ್ಲಿ ಮಳೆ ನೀರು ತುಂಬಿ ಕೆರೆಯಂತಾಗಿದೆ. ಮೆಟ್ರೋ ಪ್ರಯಾಣಿಕರು ಓಡಾಡಲು ಭಯಪಡುವಂತಾಗಿದೆ. ಮೆಟ್ರೋ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ನೀರು ತುಂಬಿದೆ.
ಮುಂಬೈನಲ್ಲಿ ಸುಮಾರು 13 ಗಂಟೆಗಳ ಕಾಲ ರಾತ್ರಿಯಿಡೀ ಸುರಿದ ಭಾರೀ ಮಳೆಯ ನಂತರ ಆಕ್ವಾ ಲೈನ್ 3 ರಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಆಚಾರ್ಯ ಅತ್ರೆ ಚೌಕ್ ಅಂಡರ್ಗ್ರೌಂಡ್ ಮೆಟ್ರೋ ನಿಲ್ದಾಣವು ಮುಳುಗಿ ಹೋಗಿದೆ. ಮೇ 10ರಿಂದ ಕಾರ್ಯನಿರ್ವಹಿಸುತ್ತಿರುವ ಆಚಾರ್ಯ ಅತ್ರೆ ಚೌಕ್ ಭೂಗತ ಮೆಟ್ರೋ ನಿಲ್ದಾಣವು ಮುಂಬೈನ ಪ್ರಮುಖ ವ್ಯಾಪಾರ ಜಿಲ್ಲೆಗಳಾದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ವರ್ಲಿಯನ್ನು ಸಂಪರ್ಕಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

