ನಾಯಕತ್ವದ ಬಗ್ಗೆ ಮತ್ತೆ ಧ್ವನಿ ಎತ್ತಿದ ಡಿಕೆಶಿ: ಶಿವರಾತ್ರಿಯಂದೇ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ
ಸಿಎಂ ಹುದ್ದೆ ಮೇಲೆ ಕಣ್ಣಿಟ್ಟ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಬೇಕೆಂದು ಸಿದ್ದರಾಮಯ್ಯ ಬಣದ ನಾಯಕರುಗಳ ಕೂಗು ಜೋರಾಗಿ ಕೇಳಿಬರುತ್ತಿದೆ. ಈ ಸಂಬಂಧ ಡಿಕೆಶಿ, ಸಿದ್ದರಾಮಯ್ಯ ಬಣದ ನಾಯಕರ ಮುಸುಕಿನ ಗುದ್ದಾಟ ತಾರಕಕ್ಕೇರುತ್ತಿದ್ದು, ಇದೀಗ ಇದಕ್ಕೆ ಸ್ವತಃ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ವಿರೋಧಿಗಳಿಗೆ ಹೊಸ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು, (ಫೆಬ್ರವರಿ 26): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನನ್ನು ಉಪಮುಖ್ಯಮಂತ್ರಿ ಮಾಡಿದೆ. 90ನೇ ಇಸವಿಯಿಂದಲೇ ಮಂತ್ರಿ ಮಾಡಿ ಬೆಳೆಸಿದೆ. ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ, ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ ಹೇಗೆ? ನಾನು ಮನೆಯಲ್ಲಿ ಕೂರುವುದಕ್ಕಾ..? ಕಾಂಗ್ರೆಸ್ ನನಗೆ ಶಕ್ತಿ ಕೊಟ್ಟಿರುವುದು. ನಾನು ಯಾವುದೇ ಸ್ಥಾನದಲ್ಲಿದ್ದರೂ ನಾಯಕತ್ವ ವಹಿಸುತ್ತೇನೆ. ಪಕ್ಷ ಇಷ್ಟೆಲ್ಲ ನಾಯಕತ್ವ ಕೊಟ್ಟಾಗ ನನ್ನ ಲೀಡರ್ ಶಿಪ್‌ನಲ್ಲಿ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಆಗಿ ಹೇಳಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿಬಂದ ಬಳಿಕ ನನ್ನ ನಾಯಕತ್ವದಲ್ಲೇ ಚುನಾವಣೆ ಎಂಬ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ಹೌದ್ರೀ, ನಾನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ. ಪಕ್ಷ ನನ್ನ ಡೆಪ್ಯುಟಿ ಸಿಎಂ ಮಾಡಿದೆ. 90ನೇ ಇಸವಿಯಿಂದಲೇ ಮಂತ್ರಿ ಮಾಡಿ ಬೆಳೆಸಿದೆ. ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ. ನಾನು ಮನೆಯಲ್ಲಿ ಕೂರುವುದಕ್ಕಾ? ಕಾಂಗ್ರೆಸ್ ಶಕ್ತಿ ಕೊಟ್ಟಿರುವುದು. ಏನೇ ಸ್ಥಾನದಲ್ಲಿ ನಾನು ಇದ್ದರೂ ನಾಯಕತ್ವ ವಹಿಸುತ್ತೇನೆ ಎಂದರು.
ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಕ್ಯಾಂಪೇನ್ ಕಮಿಟಿ ಅಧ್ಯಕ್ಷ ಆಗಿದ್ದೆ. ಕಳೆದ ಚುನಾವಣೆ ವೇಳೆ ಅಧ್ಯಕ್ಷ ಆಗಿದ್ದೆ. ಈಗ ಡಿಸಿಎಂ ಆಗಿದ್ದೇನೆ. ಪಕ್ಷ ನನಗೆ ಹಲವು ಜವಾಬ್ದಾರಿ ಕೊಟ್ಟು ನಾಯಕನಾಗಿ ಮಾಡಿದೆ. ನನಗೆ ಫೇಸ್ ಇದೆ ವೈಬ್ರೇಷನ್ ಇದೆ. ನನ್ನನ್ನು ದೆಹಲಿಗೂ ಕರೆಯುತ್ತಾರೆ. ಬಿಹಾರಕ್ಕೆ ಕರೆಯುತ್ತಾರೆ. ಕೇರಳಕ್ಕೂ ಬಾ ಅಂತಾರೆ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೂ ಕರೆಯುತ್ತಾರೆ. ನನಗೆ ಲೀಡರ್ ಶಿಪ್ ಇದೆ ಅಂತ ಬೇರೆ ಬೇರೆ ರಾಜ್ಯಕ್ಕೆ ಕರೆಯುತ್ತಾರೆ. ನಿಮ್ಮನ್ನ ಕರೀತಾರಾ? ಬೇರೆಯವರನ್ನ ಕರೀತಾರಾ? ಎಂದು ರಾಜಕೀಯ ವಿರೋಧಿಗಳಿಗೆ ಟಾಂಗ್ ಕೊಟ್ಟರು.
ನನಗೆ ಇರುವ ಅನುಭವ ಶಕ್ತಿ ಹಾಗೂ ವೈಬ್ರೇಷನ್ ಅನ್ನು ಪಾರ್ಟಿಗೆ ಬಳಸಬೇಕು. ಎಲ್ಲರನ್ನೂ ಬಳಸಿಕೊಳ್ಳಬೇಕು. ಪಕ್ಷ ಇಷ್ಟೆಲ್ಲ ನಾಯಕತ್ವ ಕೊಟ್ಟಾಗ ನನ್ನ ನಾಯಕತ್ವದಲ್ಲಿ ಅಥವಾ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ. ಸಿದ್ದರಾಮಯ್ಯನವರ ನಾಯಕತ್ವ ಕೂಡ ಇರುತ್ತದೆ. ಸಿದ್ದರಾಮಯ್ಯ ಕೂಡ ಇರುತ್ತಾರ, ಸಾಮೂಹಿಕ ನಾಯಕತ್ವ ಇರುತ್ತದೆ ಎಂದು ಹೇಳಿದರು. ಈ ಮೂಲಕ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿರುವ ನಾಯಕರುಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.