ಪ್ರತಿಭಾವಂತ ಮಕ್ಕಳನ್ನು ಅಯೋಗ್ಯರೆಂದ ಪ್ರಲ್ಹಾದ್ ಜೋಷಿ ತಮ್ಮ ಮಾತನ್ನು ವಾಪಸ್ಸು ತೆಗೆದುಕೊಳ್ಳಬೇಕು: ಪ್ರಕಾಶ್ ಕೋಳಿವಾಡ

ಪ್ರತಿಭಾವಂತ ಮಕ್ಕಳನ್ನು ಅಯೋಗ್ಯರೆಂದ ಪ್ರಲ್ಹಾದ್ ಜೋಷಿ ತಮ್ಮ ಮಾತನ್ನು ವಾಪಸ್ಸು ತೆಗೆದುಕೊಳ್ಳಬೇಕು: ಪ್ರಕಾಶ್ ಕೋಳಿವಾಡ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 02, 2022 | 5:07 PM

ಮಕ್ಕಳ ಪ್ರತಿಭೆಯ ಬಗ್ಗೆ ಸಚಿವ ಪ್ರಲ್ಹಾದ್ ಜೋಷಿ ಅವರು ಅವಹೇಳನಕಾರಿಯಾಗಿ ಮಾತಾಡಿದ್ದು ಸರಿಯಲ್ಲ. ಅವರು ಕೂಡಲೇ ತಮ್ಮ ಮಾತನ್ನು ವಾಪಸ್ಸು ತೆಗೆದುಕೊಳ್ಳಬೇಕು ಅಂತ ಕೋಳಿವಾಡ್ ಅವರು ಆಗ್ರಹಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ (Pralhad Joshi) ಅವರಾಡಿದ ಮಾತು ವ್ಯಾಪಕವಾಗಿ ಖಂಡನೆಯಾಗುತ್ತಿದೆ. ಮಾತು ಮನೆ ಕೆಡಿಸಿತು ತೂತು ಒಲೆ ಅಂತ ಹೇಳುತ್ತಾರೆ, ಜೋಷಿಯವರ ಸ್ಥಿತಿ ಹಾಗಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವರು ಮಾತಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೆ, ಯಾಮಾರಿದರೆ ಫಜೀತಿಯಾಗುತ್ತದೆ ಅಂತ ಹಿರಿಯ ರಾಜಕಾರಣಿಗೆ ಹೊಳೆಯದಿರುವುದು ದುರಂತ. ಅವರು ಹೇಳಿದ್ದದೇನು ಅಂತ ಈಗಾಗಲೇ ಎಲ್ಲರಿಗೆ ಗೊತ್ತಾಗಿದೆ. ಭಾರತದಲ್ಲಿ ಹೆಚ್ಚು ಅಂಕ ಪಡೆದು ಸೀಟು ಗಿಟ್ಟಿಸಲು ಯೋಗ್ಯತೆ ಇಲ್ಲದವರು (incompetent), ಬೇರೆ ದೇಶಗಳಿಗೆ ಹೋಗಿ ಓದುತ್ತಾರೆ ಅಂತ ಅವರು ಹೇಳಿದ್ದಾರೆ. ಹಾವೇರಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತಾಡಿದ ಕಾಂಗ್ರೆಸ್ ನಾಯಕ ಪ್ರಕಾಶ್ ಕೋಳಿವಾಡ (Prakash Koliwad) ಅವರು, ಪಿಯುಸಿಯಲ್ಲಿ ಶೇಕಡಾ 97 ಮಾರ್ಕ್ಸ್ ಪಡೆದ ವಿದ್ಯಾರ್ಥಿ ಅಯೋಗ್ಯ ಹೇಗಾಗುತ್ತಾನೆ ಅಂತ ಪ್ರಶ್ನಿಸಿದರು.

ಉಜ್ವಲ ಪ್ರತಿಭೆಯ ಮಕ್ಕಳು ವಿದೇಶಗಳಿಗೆ ಓದಲು ಯಾಕೆ ಹೋಗುತ್ತಾರೆ ಅಂತ ಜೋಷಿಯವರಿಗೆ ಗೊತ್ತಿಲ್ಲ. ಭಾರತದಲ್ಲಿ ಮೆಡಿಕಲ್ ಓದಬೇಕಾದರೆ 2-3 ಕೋಟಿ ರೂಪಾಯಿ ಬೇಕಾಗುತ್ತದೆ. ಅದರೆ ಉಕ್ರೇನಲ್ಲಿ ವರ್ಷಕ್ಕೆ 5 ಲಕ್ಷ ರೂ. ಗಳಾದರೆ ಸಾಕು. ಬಡ ಮತ್ತು ಮಧ್ಯಮ ಕುಟುಂಬದ ಮಕ್ಕಳು ಕೋಟಿಗಟ್ಟಲೆ ಹಣ ಎಲ್ಲಿಂದ ಹೊಂದಿಸುತ್ತಾರೆ? ಎಂದು ಕೋಳಿವಾಡ್ ಪ್ರಶ್ನೆ ಹಾಕಿದರು.

ಮಕ್ಕಳು ಅಯೋಗ್ಯರಲ್ಲ, ಡೊನೇಷನ್ ಹಾವಳಿ ತಡೆಯಲಾಗದ ಸರ್ಕಾರಗಳು ಆಯೋಗ್ಯ ಎಂದು ಅವರು ಹೇಳಿದರು.

ಮಕ್ಕಳ ಪ್ರತಿಭೆಯ ಬಗ್ಗೆ ಸಚಿವ ಪ್ರಲ್ಹಾದ್ ಜೋಷಿ ಅವರು ಅವಹೇಳನಕಾರಿಯಾಗಿ ಮಾತಾಡಿದ್ದು ಸರಿಯಲ್ಲ. ಅವರು ಕೂಡಲೇ ತಮ್ಮ ಮಾತನ್ನು ವಾಪಸ್ಸು ತೆಗೆದುಕೊಳ್ಳಬೇಕು ಅಂತ ಕೋಳಿವಾಡ್ ಅವರು ಆಗ್ರಹಿಸಿದರು.

ಇದನ್ನೂ ಓದಿ:  ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಉಕ್ರೇನಲ್ಲಿ ಮಡಿದ ನವೀನ್ ಮನಗೆ ಭೇಟಿ ನೀಡಿ ತಂದೆತಾಯಿಗಳನ್ನು ಸಂತೈಸಿದರು