ಕೆಜಿಎಫ್ ಚಿನ್ನದ ಗಣಿಗೆ ಬಿಬಿಎಂಪಿ ಕಸ! 300 ಎಕರೆ ಜಾಗ ಗುರುತು ಮಾಡಿದ ಕೋಲಾರ ಜಿಲ್ಲಾಡಳಿತ

ಕೆಜಿಎಫ್ ಚಿನ್ನದ ಗಣಿಗೆ ಬಿಬಿಎಂಪಿ ಕಸ! 300 ಎಕರೆ ಜಾಗ ಗುರುತು ಮಾಡಿದ ಕೋಲಾರ ಜಿಲ್ಲಾಡಳಿತ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: Ganapathi Sharma

Updated on: Aug 23, 2024 | 1:09 PM

ಬೆಂಗಳೂರು ನಗರದ ಕಸವನ್ನು ಕೋಲಾರದ ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ವಿಲೇವಾರಿ ಮಾಡುವ ಬಗ್ಗೆ ಹಿಂದೊಮ್ಮೆ ಚರ್ಚೆ ನಡೆದು, ವಿರೋಧ ವ್ಯಕ್ತವಾಗಿತ್ತು. ಇದೀಗ ಸರ್ಕಾರ ಮತ್ತೆ ಆ ಸಾಹಸಕ್ಕೆ ಕೈಹಾಕಲು ಮುಂದಾಗಿದೆ. ಈ ಕುರಿತು ‘ಟಿವಿ9’ ಕೋಲಾರ ವರದಿಗಾರ ರಾಜೇಂದ್ರ ಸಿಂಹ ನೀಡಿರುವ ವಿಸ್ತೃತ ವರದಿ ಇಲ್ಲಿದೆ ನೋಡಿ.

ಕೋಲಾರ, ಆಗಸ್ಟ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಸವನ್ನು ಕೋಲಾರದ ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ವಿಲೇವಾರಿ ಮಾಡಲು ಮತ್ತೆ ಯೋಜನೆ ರೂಪಿಸಲಾಗುತ್ತಿದೆ. ಕೋಲಾರ ಜಿಲ್ಲಾಡಳಿತವು ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೆಜಿಎಫ್​ ತಾಲ್ಲೂಕಿನಲ್ಲಿ 300 ಎಕರೆ ಜಾಗ ಗುರುತು ಮಾಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಜಾಗ ಗುರುತು ಮಾಡಲಾಗಿದೆ.

ಹೊಸದಾಗಿ ನಿರ್ಮಾಣವಾಗಿರುವ ಚೆನೈ – ಬೆಂಗಳೂರು ಎಕ್ಸ್​ಪ್ರೆಸ್​​​ ಕಾರಿಡಾರ್​ ಹೆದ್ದಾರಿ ಮೂಲಕ ತೆರಳಿ ಬಿಬಿಎಂಪಿ ಕಸವನ್ನು ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. 100 ಎಕರೆ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಘಟಕ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿದೆ.

200 ಎಕರೆ ಪ್ರದೇಶದಲ್ಲಿ ದಟ್ಟವಾದ ಕಾಡು ಬೆಳೆಸಿ ಬಯೋ ಪೆನ್ಸಿಂಗ್​ ಮಾಡಲಾಗುತ್ತದೆ. ಆ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸಲಾಗುತ್ತಿದೆ. ಸದ್ಯ ಕಸ ವಿಲೇವಾರಿ ಘಟಕ ನಿರ್ಮಾಣ ವಿಚಾರ ಪ್ರಾಥಮಿಕ ಹಂತದಲ್ಲಿ ಚರ್ಚೆಯಲ್ಲಿದೆ.

ಇದನ್ನೂ ಓದಿ: ಕೋಲಾರ: ವೀಲಿಂಗ್ ಪುಂಡರ ಹುಚ್ಚಾಟಕ್ಕೆ ಅರ್ಚಕ ಬಲಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಈ ಹಿಂದೆ 2015 ರಲ್ಲಿ ಕೂಡಾ ಕೆಜಿಎಫ್​ನ ಚಿನ್ನದ ಗಣಿ ಗುಂಡಿಯಲ್ಲಿ ಕಸ ಸುರಿಯುವ ಯೋಜನೆ ರೂಪಿಸಲಾಗಿತ್ತು. ಆದರೆ, ಆಗ ಕೆಜಿಎಫ್​ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಆ ಪ್ರಸ್ತಾಪವನ್ನು ಕೈಬಿಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ