ಸಂವಿಧಾನದ ಗೌರವವನ್ನು ಕಾಂಗ್ರೆಸ್ ಪಕ್ಷದವರು ಹಾಳು ಮಾಡಿದ್ದಾರೆ: ಪ್ರಧಾನಿ ಮೋದಿ ವಾಗ್ದಾಳಿ
PM Modi Interview with Tv9 editors: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಮಾಡಲಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ. ಟಿವಿ9 ನೆಟ್ವರ್ಕ್ನ ಆರ್ ಮಂದಿ ಸಂಪಾದಕರ ಜೊತೆ ದುಂಡುಮೇಜಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಸಂವಿಧಾನ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಮಾತಿನ ವಿಡಿಯೋ ಇಲ್ಲಿದೆ.
ನವದೆಹಲಿ / ಬೆಂಗಳೂರು, ಮೇ 3: ಸಂವಿಧಾನದ ಗೌರವವನ್ನು ಕಾಂಗ್ರೆಸ್ ಪಕ್ಷದವರು ಹಾಳು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು. ಟಿವಿ9 ನೆಟ್ವರ್ಕ್ನ (TV9 Network) 6 ಭಾಷೆಗಳ ಸಂಪಾದಕರು ನಡೆಸಿದ ದುಂಡುಮೇಜಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಸಂವಿಧಾನದ (Indian Constitution) ಪಾವಿತ್ರ್ಯತೆಯನ್ನು ಹಾಳುಗೆಡವಿದ್ದಾರೆ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಈಗ ನಮ್ಮ ಬಳಿ ಎಷ್ಟು ಸೀಟು ಇವೆ? ಈಗ ಕೂಡ ಎನ್‌ಡಿಎ ಮೈತ್ರಿಕೂಟದ ಬಳಿ 360 ಸ್ಥಾನಗಳಿವೆ. ಮೈತ್ರಿಕೂಟ ಹೊರತುಪಡಿಸಿ ಸಂಸತ್ತಿನಲ್ಲಿ ನಮಗೆ ಬಾಹ್ಯ ಬೆಂಬಲ ನೀಡುವ ಪಕ್ಷಗಳನ್ನು ಪರಿಗಣಿಸಿದರೆ ಈಗಲೂ ನಮ್ಮ ಬಳಿ 400 ಸ್ಥಾನ ಇದೆ. ಸಂವಿಧಾನ ಬದಲಾವಣೆ ಮಾಡಲೇಬೇಕು ಎಂದಿದ್ದರೆ ಈಗಾಗಲೇ ಮಾಡಿರುತ್ತಿದ್ದೆವು ಎಂದರು.
ಹೀಗಾಗಿ ಪ್ರತಿಪಕ್ಷಗಳ ಆರೋಪದಲ್ಲಿ ಉರುಳಿಲ್ಲ. ಸಂವಿಧಾನವನ್ನು ಪವಿತ್ರ ಎಂದು ನಂಬದ ಕಾಂಗ್ರೆಸ್ ಪಕ್ಷದವರೇ ಈಗ ಆರೋಪ ಮಾಡುತ್ತಿದ್ದಾರೆ. ಸಂವಿಧಾನದ ಪಾವಿತ್ರ್ಯತೆಯನ್ನು ಕಾಂಗ್ರೆಸ್ ಈ ಹಿಂದೆ ಹಲವು ಬಾರಿ ಹಾಳು ಮಾಡಿದೆ ಎಂದು ಮೋದಿ ಹೇಳಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಯತ್ನಿಸಿದ್ದರು ಎಂದು ಮೋದಿ ಆರೋಪಿಸಿದ್ದಾರೆ.
ಇದನ್ನೂ ಓದಿ: PM Modi Interview: 25 ವರ್ಷದ ರಾಜಕೀಯದಲ್ಲಿ ನನಗೆ ಒಂದೂ ಕಪ್ಪು ಚುಕ್ಕಿ ಅಂಟಿಲ್ಲ; ಪ್ರಧಾನಿ ಮೋದಿ
ಸಂವಿಧಾನದಲ್ಲಿ ಗಮನಿಸಬೇಕಾದ 3 ಅಂಶಗಳು
ಭಾರತದ ಸಂವಿಧಾನದಲ್ಲಿ ಗಮನಿಸಬೇಕಾದ ಮೂರು ಅಂಶಗಳ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಮೊದಲನೆಯದ್ದಾಗಿ, ಭಾರತದ ಸಂವಿಧಾನ ಒಂದು ಸಾಮಾಜಿಕ ದಾಖಲೆಯಾಗಿದೆ. ಎರಡನೇಯದ್ದೆಂದರೆ, ಭವಿಷ್ಯದ ದೃಷ್ಟಿಯಿಂದ ದೇಶವನ್ನು ಚೆನ್ನಾಗಿ ನಡೆಸಬೇಕೆನ್ನುವ ದೃಷ್ಟಿಯಿಂದ ರೂಪಿಸಲಾಗಿದೆ. ಮೂರನೇಯದ್ದು ಲಿಖಿತ ರೂಪದಲ್ಲಿ ಇಲ್ಲವಾದರೂ, ಚಿತ್ರ ರೂಪದಲ್ಲಿದೆ. ಸಂವಿಧಾನದ ಪ್ರತಿ ಪುಟದಲ್ಲಿಯೂ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸಕ್ಕೆ ಸಂಬಂಧಿಸಿದ ಚಿತ್ರಗಳಿವೆ ಎಂದು ಮೋದಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ