ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಮಹಾಕುಂಭದ ಗಂಗಾಜಲ ನೀಡಿದ ಪ್ರಧಾನಿ ಮೋದಿ

Updated on: Mar 17, 2025 | 7:40 PM

ಅಮೆರಿಕದ ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ದೆಹಲಿಯಲ್ಲಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ತುಳಸಿ ಅವರಿಗೆ ಮಹಾಕುಂಭದ ಗಂಗಾಜಲವನ್ನು ನೀಡಿದ್ದಾರೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದ ಸಂಕೇತವಾಗಿ, ಪ್ರಧಾನಿ ಮೋದಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ಪ್ರಯಾಗರಾಜ್ ಮಹಾಕುಂಭದ ಗಂಗಾಜಲವನ್ನು ಹೊಂದಿರುವ ಹೂದಾನಿಯನ್ನು ಗಬ್ಬಾರ್ಡ್ ಅವರಿಗೆ ನೀಡಿದರು. ಗಂಗಾನದಿಯ ಪವಿತ್ರ ನೀರು ಭಾರತದಲ್ಲಿ ಬಹಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

ನವದೆಹಲಿ, (ಮಾರ್ಚ್ 17): ಭಾರತ ಪ್ರವಾಸದಲ್ಲಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ (ಡಿಎನ್‌ಐ) ನಿರ್ದೇಶಕಿ ತುಳಸಿ ಗಬ್ಬಾರ್ಡ್ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಮ್ಮನ್ನು ಭೇಟಿಯಾದ ತುಳಸಿ ಗಬ್ಬಾರ್ಡ್ ಅವರಿಗೆ ಪ್ರಧಾನಿ ಮೋದಿ ಮಹಾಕುಂಭದ ಸಮಯದಲ್ಲಿ ಸಂಗ್ರಹಿಸಲಾದ ಗಂಗಾಜಲವನ್ನು ನೀಡಿದ್ದಾರೆ. ಫೆಬ್ರವರಿ 26ರಂದು ಮುಕ್ತಾಯಗೊಂಡ ಮಹಾಕುಂಭ ಪ್ರಯಾಗರಾಜ್‌ನಲ್ಲಿರುವ ತ್ರಿವೇಣಿ ಸಂಗಮಕ್ಕೆ 66 ಕೋಟಿಗೂ ಹೆಚ್ಚು ಜನರನ್ನು ಆಕರ್ಷಿಸಿತ್ತು. ಡೊನಾಲ್ಡ್ ಟ್ರಂಪ್ ಸರ್ಕಾರದ ಉನ್ನತ ಅಧಿಕಾರಿಯಾದ ತುಳಸಿ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದಾರೆ. ಅವರ ಎರಡೂವರೆ ದಿನಗಳ ಪ್ರವಾಸಕ್ಕಾಗಿ ತುಳಸಿ ಗಬ್ಬಾರ್ಡ್ ಭಾನುವಾರ ಮುಂಜಾನೆ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದರು. ನಿನ್ನೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರನ್ನು ಭೇಟಿಯಾದ ತುಳಸಿ ಇಂದು ಬೆಳಗ್ಗೆ ದೆಹಲಿಯಲ್ಲಿ ಆಯೋಜಿಸಿದ್ದ ಜಾಗತಿಕ ಗುಪ್ತಚರ ಮುಖ್ಯಸ್ಥರ ಸಮಾವೇಶದಲ್ಲಿ ಭಾಗವಹಿಸಿದ ನಂತರ ರಾಜನಾಥ್ ಸಿಂಗ್ ಅವರೊಂದಿಗಿನ ಮಾತುಕತೆ ನಡೆಸಿದರು. ಇದೀಗ ಸಂಜೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ