ನರೇಂದ್ರ ಮೋದಿ ಪೋಡ್ಕ್ಯಾಸ್ಟ್; ಲೆಕ್ಸ್ ಫ್ರೀಡ್ಮ್ಯಾನ್ ವರ್ಸಸ್ ನಿಖಿಲ್ ಕಾಮತ್, ಯಾವುದಕ್ಕೆ ಹೆಚ್ಚು ವ್ಯೂಸ್?
Lex Fridman's podcast with Narendra Modi: ಅಮೆರಿಕನ್ ಸಂಶೋಧಕ ಮತ್ತು ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್ಮ್ಯಾನ್ ಅವರು ನರೇಂದ್ರ ಮೋದಿ ಸಂದರ್ಶನ ಮಾಡಿರುವ ವಿಡಿಯೋವನ್ನು ಯೂಟ್ಯೂಬ್ಗೆ ನಿನ್ನೆ ಹಾಕಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಇಂಟರ್ವ್ಯೂ ಅನ್ನು ಹಂಚಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ನಿಖಿಲ್ ಕಾಮತ್ ಅವರಿಗೆ ಮೋದಿ ಸಂದರ್ಶನ ನೀಡಿದ್ದರು. ಆ ವಿಡಿಯೋ 4.5 ಲಕ್ಷ ವೀಕ್ಷಣೆ ಪಡೆದಿತ್ತು.

ನವದೆಹಲಿ, ಮಾರ್ಚ್ 17: ಅಮೆರಿಕದ ಖ್ಯಾತ ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್ಮ್ಯಾನ್ (Lex Fridman) ಅವರು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ನರೇಂದ್ರ ಮೋದಿ ಜೊತೆಗಿನ ಸುದೀರ್ಘ ಸಂದರ್ಶನವನ್ನು ಅಪ್ಲೋಡ್ ಮಾಡಿದ್ದಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಪೋಡ್ಕ್ಯಾಸ್ಟ್ ಪ್ರಸಾರ ಮಾಡಲಾಗಿತ್ತು. ಆದಾಗ್ಯೂ ಲೆಕ್ಸ್ ಫ್ರೀಡ್ಮ್ಯಾನ್ ಅವರ ಮೋದಿ ಇಂಟರ್ವ್ಯೂ ವಿಡಿಯೋ ಒಂದೇ ದಿನದ ಅಂತದಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಪಡೆದಿದೆ. ಲೆಕ್ಸ್ ಅವರ ಜನಪ್ರಿಯ ವಿಡಿಯೋಗಳಲ್ಲಿ ಇದೂ ಕೂಡ ಒಂದೆನಿಸುವ ಹಾದಿಯಲ್ಲಿದೆ.
ಖಾಸಗಿ ಯೂಟ್ಯೂಬ್ ವಾಹಿನಿಗೆ ನರೇಂದ್ರ ಮೋದಿ ಅವರು ನೀಡಿದ ಎರಡನೇ ಸಂದರ್ಶನ ಇದು. ಹೊರ ದೇಶದವರೊಬ್ಬರಿಗೆ ಮೋದಿ ಸಂದರ್ಶನ ನೀಡಿದ್ದು ಇದೇ ಮೊದಲು. ಭಾರತದ ಉದ್ಯಮಿ ನಿಖಿಲ್ ಕಾಮತ್ ಅವರ ಪೋಡ್ಕ್ಯಾಸ್ಟ್ನ್ಲಲಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಈವರೆಗೆ ಅತಿಹೆಚ್ಚು ವೀಕ್ಷಣೆ ಪಡೆದ ನಿಖಿಲ್ ಕಾಮತ್ ವಿಡಿಯೋಗಳ ಪೈಕಿ ಮೋದಿ ಇಂಟರ್ವ್ಯೂ ಎರಡನೇ ಸ್ಥಾನದಲ್ಲಿದೆ. ಜನವರಿ 10ರಂದು ನಿಖಿಲ್ ಕಾಮತ್ ಅವರು ಮೋದಿ ಸಂದರ್ಶನದ ಪೂರ್ಣ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಎರಡು ತಿಂಗಳಲ್ಲಿ ಅದು 45 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ನಿಖಿಲ್ ಕಾಮತ್ ಅವರ ಮೋದಿ ಸಂದರ್ಶನದ ವಿಡಿಯೋ
ಈಗ ಲೆಕ್ಸ್ ಫ್ರೀಡ್ಮ್ಯಾನ್ ಅವರು ನಿನ್ನೆ (ಮಾ. 16) ಸಂಜೆ ಮೋದಿ ಸಂದರ್ಶನದ ವಿಡಿಯೋವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ. ಮೂರು ಗಂಟೆ ಹದಿನೇಳು ನಿಮಿಷದ ಈ ವಿಡಿಯೋ 24 ಗಂಟೆ ಮುಗಿಯುವುದರೊಳಗೆ 13 ಲಕ್ಷ ವೀಕ್ಷಣೆ ಪಡೆಯುವ ಸಾಧ್ಯತೆ ಇದೆ. ಈ ಸುದ್ದಿ ಬರೆಯುವಾಗ ವೀಕ್ಷಣೆಗಳ ಸಂಖ್ಯೆ 11 ಲಕ್ಷ ಗಡಿ ದಾಟಿತ್ತು.
ಲಿಕ್ಸ್ ಫ್ರೀಡ್ಮ್ಯಾನ್ ಅವರ ಮೋದಿ ಸಂದರ್ಶನದ ವಿಡಿಯೋ
ಲೆಕ್ಸ್ ಫ್ರೀಡ್ಮ್ಯಾನ್ರ ಜನಪ್ರಿಯ ವಿಡಿಯೋಗಳು..
ಲೆಕ್ಸ್ ಫ್ರೀಡ್ಮ್ಯಾನ್ ಅವರ ಪೋಡ್ಕ್ಯಾಸ್ಟ್ಗಳು ಬಹಳ ಜನಪ್ರಿಯವಾಗಿವೆ. ಡೊನಾಲ್ಡ್ ಟ್ರಂಪ್, ಇಲಾನ್ ಮಸ್ಕ್, ವೊಲೋಡಮಿರ್ ಝೆಲೆನ್ಸ್ಕಿ, ಮಾರ್ಕ್ ಜುಕರ್ಬರ್ಗ್ ಇತ್ಯಾದಿ ಬಹಳಷ್ಟು ಖ್ಯಾತನಾಮರನ್ನು ಅವರು ಇಂಟರ್ವ್ಯೂ ಮಾಡಿದ್ದಾರೆ. ಅವರ 11 ವಿಡಿಯೋಗಳು ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದಿವೆ. 200ಕ್ಕೂ ಹೆಚ್ಚು ವಿಡಿಯೋಗಳು ಹತ್ತು ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದಿರುವುದು ಗಮನಾರ್ಹ.
ಎರಡು ವರ್ಷದ ಹಿಂದೆ ಲೆಕ್ಸ್ ಫ್ರೀಡ್ಮ್ಯಾನ್ ಅವರು ಸಿಐಎ ಗೂಢಚಾರಿ ಆಂಡ್ರ್ಯೂ ಬುಸ್ಟಮಾಂಟೆ ಅವರನ್ನು ಸಂದರ್ಶಿಸಿದ್ದರು. ಮೂರೂವರೆ ಗಂಟೆ ಅವಧಿಯ ಆ ವಿಡಿಯೋ ಹತ್ತಿರಹತ್ತಿರ ಎರಡು ಕೋಟಿಯಷ್ಟು ವೀಕ್ಷಣೆ ಪಡೆದಿದೆ.
ಲೆಕ್ಸ್ ಫ್ರೀಡ್ಮ್ಯಾನ್ ಅವರ ಯೂಟ್ಯೂಬ್ ವಾಹಿನಿಯ ಲಿಂಕ್
ಆರು ತಿಂಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಸಂದರ್ಶನವನ್ನು ಲೆಕ್ಸ್ ಅಪ್ಲೋಡ್ ಮಾಡಿದ್ದರು. ಒದು 75 ಲಕ್ಷದಷ್ಟು ವೀಕ್ಷಣೆ ಪಡೆದಿದೆ. ಇಲಾನ್ ಮಸ್ಕ್ ಅವರೊಂದಿಗೆ ಹಲವು ಸಂದರ್ಶನಗಳನ್ನು ಮಾಡಿದ್ದಾರೆ. ಎಲ್ಲವೂ ಕೂಡ ಜನಪ್ರಿಯವಾಗಿವೆ.
ನರೇಂದ್ರ ಮೋದಿ ಅವರ ಸಂದರ್ಶನದ ವಿಡಿಯೋ ಬಹಳ ಜನಪ್ರಿಯತೆ ಗಳಿಸುತ್ತಿದೆ. ಲೆಕ್ಸ್ ಫ್ರೀಡ್ಮ್ಯಾನ್ ಅವರ ಟಾಪ್-50 ವಿಡಿಯೋಗಳಲ್ಲಿ ಇದೂ ಒಂದಾಗುವ ಸಾಧ್ಯತೆ ಇದೆ. 37 ಲಕ್ಷ ವೀಕ್ಷಣೆಯ ಗಡಿ ದಾಟಿದರೆ ಟಾಪ್-50ಗೆ ಸೇರಬಹುದು. ಆ ಸಾಧ್ಯತೆಯಂತೂ ದಟ್ಟವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸಂದರ್ಶನಕ್ಕಾಗಿ 45 ಗಂಟೆಗಳ ಕಾಲ ಉಪವಾಸ ಮಾಡಿದ ಲೆಕ್ಸ್ ಫ್ರೀಡ್ಮ್ಯಾನ್
ಪಾಶ್ಚಾತ್ಯ ಜಗತ್ತಿಗೆ ಅಚ್ಚರಿ ಹುಟ್ಟಿಸಿದ ನರೇಂದ್ರ ಮೋದಿ
ಇದಕ್ಕಿಂತ ಹೆಚ್ಚಾಗಿ, ಪಾಶ್ಚಾತ್ಯ ಜಗತ್ತು ನರೇಂದ್ರ ಮೋದಿ ಅವರತ್ತ ಮತ್ತೊಮ್ಮೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ ಈ ಪೋಡ್ಕ್ಯಾಸ್ಟ್. ನರೇಂದ್ರ ಮೋದಿ ಜೊತೆ ಆತ್ಮೀಯತೆ ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಪೋಡ್ಕ್ಯಾಸ್ಟ್ ಅನ್ನು ತಮ್ಮ ಟ್ರೂತ್ ಸೋಷಿಯಲ್ನಲ್ಲಿ ಶೇರ್ ಮಾಡಿದ್ದಾರೆ.
ಕುತೂಹಲ ಎಂದರೆ, ಮೋದಿ ಅವರು ಈ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರಶಂಸೆ ಮಾಡಿದ್ದಾರೆ. ಟ್ರಂಪ್ ಅವರಿಗೆ ಅಮೆರಿಕ ಹೇಗೆ ಆದ್ಯತೆಯೋ, ತಮಗೂ ಕೂಡ ದೇಶದ ಹಿತವೇ ಮುಖ್ಯ ಎಂದು ತಮ್ಮಿಬ್ಬರ ನಿಲುವಿನಲ್ಲಿರುವ ಸಾಮ್ಯತೆಯನ್ನು ಮೋದಿ ವಿವರಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Mon, 17 March 25