ನಿರ್ಬಂಧಗಳು ಬೇಡ, ಮುನ್ನೆಚ್ಚರಿಕೆ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಿ ಎಂದು ಪ್ರಧಾನಿ ಹೇಳಿದ್ದಾರೆ: ಬಸವರಾಜ ಬೊಮ್ಮಾಯಿ
ಜನರು ಅನಾವಶ್ಯಕವಾಗಿ ಅತಂಕ, ಗಾಬರಿಗೊಳಗಾಗದಂತೆ ನೋಡಿಕೊಳ್ಳಬೇಕು. ಸದ್ಯಕ್ಕೆ ಯಾವುದೇ ನಿರ್ಬಂಧ ಬೇಡ ಅಂತ ಪ್ರಧಾನಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
Bengaluru: ಕೋವಿಡ್ 4 ನೇ ಅಲೆಯ (4th wave) ಭೀತಿ ದೇಶದಲ್ಲಿ ಶುರುವಾಗಿದೆ. ಇದೇ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಪ್ರಧಾನಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದರು. ರಾಜ್ಯದಲ್ಲಿ ಸ್ಥಿತಿ ಹೇಗಿದೆ ಮತ್ತು ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಅಂತ ಪ್ರಧಾನಿಗಳಿಗೆ ವಿವರಣೆ ನೀಡಲಾಗಿದೆ ಎಂದು ಹೇಳಿದ ಬೊಮಾಯಿ, 6-12 ಪ್ರಾಯದ ಮಕ್ಕಳಿಗೆ ಲಸಿಕೆ ನೀಡುವುದನ್ನು ಶಾಲೆಗಳಲ್ಲೇ ಒಂದು ಅಭಿಯಾನದ ರೂಪದಲ್ಲಿ ಆರಂಭಿಸಲು ಅವರು ಸೂಚಿಸಿದ್ದಾರೆ ಎಂದರು. ಎಲ್ಲಾ ಹಂತಗಳಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಪಾಲಿಸುವಂತೆ ನಿಗಾವಹಿಸಬೇಕು ಮತ್ತು 15-18 ಪ್ರಾಯದ ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಪ್ರಧಾನಿ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಟೆಸ್ಟ್, ಟ್ರ್ಯಾಕ್, ಟ್ರೇಸ್ ಮತ್ತು ಟೀಕಾ-ನಾಲ್ಕು-ಟಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕವಾಗಿ ಜನ ಮಾಸ್ಕ್ ಧರಿಸದೆ ಓಡಾಡಬಾರದು, ದೈಹಿಕ ಅಂತರ ಕಾಯ್ದುಕೊಳ್ಳಬೇಕು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು-ಈ ನಿಯಮಗಳನ್ನು ಜಾರಿಗೊಳಿಸಿ ಅವುಗಳ ಪಕ್ಕಾ ಪಾಲನೆ ಕುರಿತು ಎಚ್ಚರವಹಿಸಬೇಕು. ಕೋವಿಡ್-19 ಸೋಂಕಿತರಿಗಾಗಿ ಆಸ್ಪತ್ರೆಗಳನ್ನು ಸಿದ್ಧಗೊಳಿಸಬೇಕು ಮತ್ತು ಎಲ್ಲ ಆಸ್ಪತ್ರೆಗಳಲಿ ಬೆಂಕಿ ನಂದಿಸುವ ಉಪಕರಣ ಇರುವುದನ್ನು ಖಾತ್ರಿಪಡಿಸಿಕೊಳ್ಳಲು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊವಿಡ್ ಲಸಿಕಾಕರಣ ಅಭಿಯಾನ ಬಹಳ ಬಿರುಸಾಗಿ ನಡೆದ ಕಾರಣ ಮೂರನೇ ಅಲೆಯಲ್ಲಿ ತೊಂದರೆಯಾಗಲಿಲ್ಲ. ಹಾಗಾಗಿ, ಇನ್ನೂ ಲಸಿಕೆಯ ಎರಡೂ ಡೋಸ್ ತೆಗೆದುಕೊಳ್ಳದವರಿದ್ದರೆ ಅವರ ಮನವೊಲಿಸಿ ಕೊಡಿಸಬೇಕು, ಅರ್ಹರಿಗೆ ಬೂಸ್ಟರ್ ಡೋಸ್ ನೀಡುವ ಕೆಲಸ ಎಡಬಿಡದೆ ಸಾಗಬೇಕು ಅಂತ ಪ್ರಧಾನಿ ಹೇಳಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಜನರು ಅನಾವಶ್ಯಕವಾಗಿ ಅತಂಕ, ಗಾಬರಿಗೊಳಗಾಗದಂತೆ ನೋಡಿಕೊಳ್ಳಬೇಕು. ಸದ್ಯಕ್ಕೆ ಯಾವುದೇ ನಿರ್ಬಂಧ ಬೇಡ ಅಂತ ಪ್ರಧಾನಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಅನ್ನ ಭಾಗ್ಯ, ತಾಳಿ ಭಾಗ್ಯ ಜನರನ್ನ ದರಿದ್ರ ಮಾಡುತ್ತದೆ; ಅದನ್ನ ಬಂದ್ ಮಾಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಒತ್ತಾಯ