ಎಫ್​ಐಆರ್ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

Updated on: Aug 31, 2026 | 7:33 AM

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣದ ನಂತರ ಹಲ್ದ್ವಾನಿಯಲ್ಲಿ ನಡೆದ ಸ್ಥಳಶುದ್ಧೀಕರಣ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಅಮಿತ್ ಕುಮಾರ್ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದು, ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಈ ಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ, ಆಗಸ್ಟ್ 31: ಉತ್ತರಾಖಂಡ್‌ನ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ನಂತರ ನಡೆದ ಸ್ಥಳಶುದ್ಧೀಕರಣ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯವನ್ನು 15-20 ದಿನಗಳ ಹಿಂದೆಯೇ ಪ್ರಸ್ತಾಪಿಸಿದ್ದರು. ಆದರೆ ರಾಹುಲ್ ಗಾಂಧಿ ಈಗ ಇದ್ದಕ್ಕಿದ್ದಂತೆ ಇದನ್ನು ನೆನಪಿಸಿಕೊಂಡು ನಾಟಕವಾಡುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ. ಅದೇ ದಿನ ರಾಜ್ಯಸಭೆಯ ನಾಯಕರಾದ ಜೆ.ಪಿ. ನಡ್ಡಾ ಅವರು ಈ ಘಟನೆಗೆ ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು ಮತ್ತು ಔಪಚಾರಿಕವಾಗಿ ನಿರಾಕರಿಸಿದ್ದರು. ಖರ್ಗೆ ಅವರು ಈ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದಾಗ ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಿಜೆಪಿ ಕಾರ್ಯಕರ್ತರಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಸ್ಥಳ ಶುದ್ಧೀಕರಣ ಆರೋಪ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಲ್ದ್ವಾನಿ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 196, 299 ಮತ್ತು 1989ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಅಮಿತ್ ಕುಮಾರ್ ಎಂಬುವರ ದೂರಿನ ಮೇರೆಗೆ ಈ ಕ್ರಮ ಕೈಗೊಂಡಿದ್ದು, ರಾಹುಲ್ ಗಾಂಧಿ ಅವರ ಹೇಳಿಕೆಯು ಸಮಾಜದಲ್ಲಿ ಜಾತಿ ನಿಂದನೆ ಮತ್ತು ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅಮಿತ್ ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us