ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಬಿಜೆಪಿ ಹಾಗೂ ಕಾಂಗ್ರಸ್ ನಡುವಣ ಅನುದಾನ ಜಗಳ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ರಾಯಚೂರು ನಗರದ ವಾರ್ಡ್ ನಂ 3ರ ಜ್ಯೋತಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ಹಾಕುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರ ನಡೆದಿದೆ. ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜುಳಾ ಮನೆ ಮುಂದೆ ಸಿಸಿ ರಸ್ತೆ ಕಾಮಗಾರಿ ಮಾಡದೇ, ಉಳಿದೆಲ್ಲ ರಸ್ತೆಗಳಿಗೆ ಮಾಡಿಸಿರುವ ಬಿಜೆಪಿ ಕೌನ್ಸಿಲರ್ ನಡೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ರಾಯಚೂರು, ಜುಲೈ 4: ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬುದು ಬಿಜೆಪಿಗರ ವಾದ. ಇತ್ತ ರಾಯಚೂರಿನಲ್ಲಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜುಳಾ ಮನೆ ಮುಂದಿನ ಸಾರ್ವಜನಿಕ ಮಾರ್ಗಕ್ಕೆ ಕಾಂಕ್ರೀಟ್ ಹಾಕದೇ ಬಿಜೆಪಿ ಕೌನ್ಸಿಲರ್ ನಾಗರಾಜ್ ಠಕ್ಕರ್ ಕೊಟ್ಟಿದ್ದಾರೆ. ವಾರ್ಡ್ನ ಎಲ್ಲಾ ದಿಕ್ಕಿನಲ್ಲೂ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಕೆಪಿಸಿಸಿ ಸೆಕ್ರೆಟರಿ ಮನೆ ರಸ್ತೆಗೆ ಮಾತ್ರ ಕಾಂಕ್ರೀಟ್ ಹಾಕದೆ ಬಿಜೆಪಿ ಕೌನ್ಸಿಲರ್ ತಿರುಗೇಟು ಕೊಟ್ಟಿದ್ದಾರೆ. ಸದ್ಯ ಅನುದಾನ ಖಾಲಿ ಆಗಿದೆ, ನಿಮ್ಮ ಸಿಎಂ ಸಿದ್ದರಾಮಯ್ಯಗೆ ಹೇಳಿ ಅನುದಾನ ಕೊಡಿಸಿ. ಆ ಮೇಲೆ ನಿಮ್ಮ ಮನೆ ಮುಂದಿನ ಮಾರ್ಗಕ್ಕೆ ಕಾಂಕ್ರೀಟ್ ರಸ್ತೆ ಮಾಡಿಸುತ್ತೇನೆ ಎಂದು ಕೌನ್ಸಿಲರ್ ನಾಗರಾಜ್ ಹೇಳಿದ್ದಾರೆ.