ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್

Edited By:

Updated on: Sep 11, 2026 | 1:28 PM

ರಾಯಚೂರು ಜಿಲ್ಲೆಯಲ್ಲಿ ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಗಣೇಶ ಮಂಡಳಿಗಳಿಂದ ಮುಚ್ಚಳಿಕೆ ಪತ್ರ ಪಡೆದು, ಶಾಂತಿ ಸಭೆಗಳನ್ನು ನಡೆಸಿ, ಮೆರವಣಿಗೆ ಮಾರ್ಗ, ಧ್ವನಿವರ್ಧಕ ಬಳಕೆ, ಅಗ್ನಿ ಸುರಕ್ಷತೆ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮೂಲಕ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಯಚೂರು, ಸೆಪ್ಟೆಂಬರ್ 11: ರಾಯಚೂರು ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಬಾರಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಮತ್ತು ಸ್ಪೂರ್ತಿದಾಯಕವಾಗಿ ಆಚರಿಸಲು ಪೊಲೀಸ್ ಇಲಾಖೆಯು ಗಣೇಶ ಮಂಡಳಿಗಳು ಮತ್ತು ಸಾರ್ವಜನಿಕರಿಗೆ ಕರೆ ನೀಡಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಗಣೇಶ ಮಂಡಳಿಗಳಿಂದ ಸೂಕ್ತ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿದೆ. ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಮತ್ತು ಜವಾಬ್ದಾರಿಗಳನ್ನು ಗಣೇಶ ಮಂಡಳಿಗಳೇ ನಿರ್ವಹಿಸುವಂತೆ ಸೂಚಿಸಲಾಗಿದೆ.

ರಾಯಚೂರು ಜಿಲ್ಲಾದ್ಯಂತ ಸುಮಾರು 2570 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಪೊಲೀಸರು ಶಾಂತಿ ಸಭೆಗಳನ್ನು ನಡೆಸಿದ್ದಾರೆ. ರಾಯಚೂರು ನಗರ, ತಾಲೂಕು ಕೇಂದ್ರಗಳು ಮತ್ತು ಗ್ರಾಮ ಮಟ್ಟದಲ್ಲಿ ಎಲ್ಲಾ ಸಮುದಾಯದ ಮುಖಂಡರೊಂದಿಗೆ ಶಾಂತಿ ಸಭೆಗಳನ್ನು ನಡೆಸಿ, ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಹಿಂದಿನ ಘಟನೆಗಳನ್ನು ಪುನರಾವರ್ತನೆಯಾಗದಂತೆ ತಡೆಯಲು ಈ ಬಾರಿ ಪೊಲೀಸ್ ಇಲಾಖೆ ಹೆಚ್ಚಿನ ಜಾಗ್ರತೆ ವಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us